ನವದೆಹಲಿ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯ ಆರಂಭಕ್ಕೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿವೆ. ಎಲ್ಲಾ ತಂಡಗಳು ಈಗಾಗಲೆ ತಮ್ಮ ನಾಯಕನನ್ನು ಘೋಷಿಸಿಕೊಂಡಿವೆ. ಆದರೆ, ಆರ್ಸಿಬಿ ಮಾತ್ರ ಇನ್ನೂ ತನ್ನ ನಾಯಕನನ್ನು ಅಂತಿಮಗೊಳಿಸಿಲ್ಲ. ಮೂಲಗಳ ಪ್ರಕಾರ, ಹಿರಿಯ ಕ್ರಿಕೆಟರ್ ಫಾಫ್ ಡು ಪ್ಲೆಸಿಸ್ ನಾಯಕತ್ವ ಸ್ಥಾನಕ್ಕೆ ಕೇಳಿ ಬರುತ್ತಿರುವ ಮುಂಚೂಣಿಯ ಹೆಸರು.
ವಿರಾಟ್ ಕೊಹ್ಲಿ 2021ರ ಆವೃತ್ತಿ ಮುಗಿಯುತ್ತಿದ್ದಂತೆ ಆರ್ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದರು. ಅಂದಿನಿಂದಲೂ ಕ್ರಿಕೆಟ್ ವಲಯದಲ್ಲಿ ಬೆಂಗಳೂರು ಪ್ರಾಂಚೈಸಿಯನ್ನು ಮುನ್ನಡೆಸುವುದಕ್ಕೆ ಯಾರು ಸೂಕ್ತ ಎನ್ನುವ ಜಿಜ್ಞಾಸೆ ನಡೆಯುತ್ತಿದೆ.
ಕ್ರಿಕೆಟಿಗರ ಮೆಗಾ ಹರಾಜಿನ ನಂತರ ಫಾಫ್ ಡು ಪ್ಲೆಸಿಸಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರ ಹೆಸರುಗಳು ಆರ್ಸಿಬಿ ನಾಯಕತ್ವದ ಚರ್ಚೆಯಲ್ಲಿ ಬಳಕೆಯಾಗುತ್ತಿದೆ. ಆದರೆ ಗ್ಲೇನ್ ಮ್ಯಾಕ್ಸ್ವೆಲ್ ವಿವಾಹವಾಗುತ್ತಿದ್ದು ಸೀಸನ್ ಆರಂಭಕ್ಕೆ ಅಲಭ್ಯರಾಗಲಿದ್ದಾರೆ. ಹಾಗಾಗಿ ಫ್ರಾಂಚೈಸಿ ಪ್ಲೆಸಿಸ್ ಅಥವಾ ದಿನೇಶ್ ಕಾರ್ತಿಕ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ:ಗಲ್ಲಿ ಕ್ರಿಕೆಟ್ to ರಣಜಿ ಟ್ರೋಫಿ.. ಗುಡಿಸಲಿನಲ್ಲಿ ಬೆಳೆದ ಹುಡುಗನ ಅದ್ಭುತ ಕ್ರಿಕೆಟ್ ಪಯಣ
ಕಾರ್ತಿಕ್ 2015ರಲ್ಲಿ ಆರ್ಸಿಬಿ ಪರ ಆಡಿದ್ದರು. ಅವರಿಗೆ ಈಗಾಗಲೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ ಅನುಭವವಿದೆ. ಇನ್ನು ಫಾಫ್ ಕೆಲವು ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವವಿದೆ. ಕಳೆದೊಂದು ದಶಕದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅವರ ಬ್ಯಾಟಿಂಗ್ ದಾಖಲೆ ನಂಬಲಸಾಧ್ಯವಾಗಿದೆ.
ಈಗಾಗಲೆ 10 ತಂಡಗಳಲ್ಲಿ 9 ತಂಡಗಳು ತಮ್ಮ ನಾಯಕನನ್ನು ಘೋಷಣೆ ಮಾಡಿಕೊಂಡಿವೆ. ಗಮನಾರ್ಹ ಸಂಗತಿಯೆಂದರೆ, 9ರಲ್ಲಿ 8 ನಾಯಕರು ಭಾರತದವರೇ ಆಗಿದ್ದಾರೆ. ಆರ್ಸಿಬಿ ಕೂಡ ಶೀಘ್ರದಲ್ಲೇ ತಂಡದ ನಾಯಕನನ್ನು ಘೋಷಿಸಲಿದ್ದೇವೆ ಎಂದು ತಿಳಿಸಿದ್ದು, ಈ ಕುರಿತು ಚರ್ಚೆ ಸಾಗುತ್ತಿದೆ ಎಂದು ಆರ್ಸಿಬಿ ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ವಿರಾಟ್ ಕೊಹ್ಲಿ ಅವರನ್ನು ನಾಯಕನಾಗಿ ಮತ್ತೆ ಮರು ಆಯ್ಕೆ ಮಾಡುವ ಕುರಿತಾದ ಮನವೊಲಿಕೆ ಕಸರತ್ತು ಕೂಡಾ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ಐಪಿಎಲ್ ತಂಡಗಳ ನಾಯಕರು:
- ಚೆನ್ನೈ ಸೂಪರ್ ಕಿಂಗ್ಸ್ (CSK) - ಎಂ.ಎಸ್.ಧೋನಿ
- ಡೆಲ್ಲಿ ಕ್ಯಾಪಿಟಲ್ಸ್ (DC) - ರಿಷಬ್ ಪಂತ್
- ಗುಜರಾತ್ ಟೈಟನ್ಸ್ (GT) - ಹಾರ್ದಿಕ್ ಪಾಂಡ್ಯ
- ಕೋಲ್ಕತ್ತಾ ನೈಟ್ ರೈಡರ್ಸ್ (KKR) - ಶ್ರೇಯಸ್ ಅಯ್ಯರ್
- ಲಕ್ನೋ ಸೂಪರ್ ಜೈಂಟ್ಸ್ (LSG) - ಕೆ.ಎಲ್.ರಾಹುಲ್
- ಮುಂಬೈ ಇಂಡಿಯನ್ಸ್ (MI) - ರೋಹಿತ್ ಶರ್ಮಾ
- ಪಂಜಾಬ್ ಕಿಂಗ್ಸ್ (PBKS) - ಮಯಾಂಕ್ ಅಗರ್ವಾಲ್
- ರಾಜಸ್ಥಾನ್ ರಾಯಲ್ಸ್ (RR) - ಸಂಜು ಸ್ಯಾಮ್ಸನ್
- ಸನ್‌ರೈಸರ್ಸ್ ಹೈದರಾಬಾದ್ (SRH) - ಕೇನ್ ವಿಲಿಯಮ್ಸನ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು - ಇನ್ನೂ ಘೋಷಣೆಯಾಗಿಲ್ಲ