ಅಹಮದಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಗ್ರ್ಯಾಂಡ್ ಫಿನಾಲೆಯಲ್ಲಿ ಭಾನುವಾರ ರಾಜಸ್ಥಾನ್ ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2008 ರ ಟೂರ್ನಮೆಂಟ್ನಲ್ಲಿ ರಾಜಸ್ಥಾನ ರಾಯಲ್ಸ್ ವಿಜೇತವಾಗಿತ್ತು. ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಗುಜರಾತ್ ಟೈಟಾನ್ಸ್ ಇದೆ.
ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಗುಜರಾತ್, ಮೊದಲ ಆವೃತ್ತಿಯಲ್ಲೇ ಫೈನಲ್‌ಗೆ ಪ್ರವೇಶಿಸಿದೆ. ಮೊದಲ ಆವೃತ್ತಿಯಲ್ಲಿ ಕಪ್ ಗೆದ್ದ ರಾಜಸ್ಥಾನ್ 15ರ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಹಾತೊರೆಯುತ್ತಿದೆ.
ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ನಾಯಕನಾಗಿದ್ದ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗಿತ್ತು. ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಮಾಡಿರುವ ಜೋಸ್ ಬಟ್ಲರ್, ರಾಜಸ್ಥಾನ ತಂಡದ ಕೈ ಹಿಡಿದಿದ್ದಾರೆ. ಅತೀ ಹೆಚ್ಚು ಸ್ಕೋರ್ ನೊಂದಿಗೆ ಪಿಂಕ್ ಕ್ಯಾಪ್ ಸಹ ಹೊಂಡಿದ್ದಾರೆ. ತಲಾ 4 ಶತಕ ಮತ್ತು ಅರ್ಧಶತಕ ಸಿಡಿಸಿರುವ ಅವರು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಸುಲಭ ಜಯಕ್ಕೆ ಕಾರಣರಾಗಿದ್ದರು.
ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಮೊದಲ ಕ್ವಾಲಿಫೈಯರ್ನಲ್ಲಿ ರಾಜಸ್ಥಾನವನ್ನು ಸೋಲಿಸಿತ್ತು. ಪಂದ್ಯಗೆದ್ದು ರಾಜಸ್ಥಾನ ಸೇಡು ತೀರಿಸಿ ಕೊಳ್ಳುತ್ತದೆಯೇ ಕಾದು ನೋಡ ಬೇಕಿದೆ. ಗುಜರಾತ್ ತಂಡಕ್ಕೆ ತವರಿನ ಅಂಗಣದಲ್ಲಿ ಸ್ಥಳೀಯ ಬೆಂಬಲಿಗರ ಪ್ರೋತ್ಸಾಹ ಇದೆ.
ಮಿಲ್ಲರ್, ತೆವಾಟಿಯಾ, ರಶೀದ್ ಖಾನ್ ಮತ್ತು ಮೊಹಮ್ಮದ್ ಶಮಿ ಗುಜರಾತ್ ತಂಡದ ಬಲವಾಗಿದ್ದಾರೆ. ಸಂಜು ಸ್ಯಾಮ್ಸನ್, ದೇವದತ್ತ ಪಡಿಕ್ಕಲ್, ಶಿಮ್ರೊನ್ ಹೆಟ್ಮೆಯರ್ ಮುಂತಾದವರು ರಾಜಸ್ಥಾನ ತಂಡದ ಬ್ಯಾಟಿಂಗ್ ಬಳಗದ ಭರವಸೆಯಾಗಿದ್ದು ಪ್ರಸಿದ್ಧ ಕೃಷ್ಣ, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್ ಅಶ್ವಿನ್ ರಾಜಸ್ಥಾನ್ ಬಲವಾಗಿದ್ದಾರೆ. ಯಾವುದೇ ಬ್ಯಾಟರ್‌ಗಳನ್ನು ಕಟ್ಟಿಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ.