ಮುಂಬೈ:ಲಖನೌ ಸೂಪರ್ ಜೈಂಟ್ಸ್ ತಂಡದ ಬೌಲರ್ಗಳ ಸಂಘಟಿತ ದಾಳಿಗೆ ರನ್ಗಳಿಸಲು ಪರದಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 149 ರನ್ಗಳಿಸಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಎಲ್ಎಸ್ಜಿ ನಾಯಕ ರಾಹುಲ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ವಿಕೆಟ್ಗೆ 7.3 ಓವರ್ಗಳಲ್ಲಿ 67 ರನ್ಗಳಿಸಿತು.
ಯುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಕೇವಲ 34 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 61 ರನ್ಗಳಿಸಿದರು. ಆದರೆ ಇವರ ಜೊತೆಗಾರ ಡೇವಿಡ್ ವಾರ್ನರ್ 12 ಎಸೆತಗಳಲ್ಲಿ ಕೇವಲ 4 ರನ್ಗಳಿಸಿದರು. ಈ ಇಬ್ಬರು ಒಂದು ಓವರ್ ಅಂತರದಲ್ಲಿ ವಿಕೆಟ್ ಒಪ್ಪಿಸಿದರು.
ಆರಂಭಿಕ ಜೋಡಿ ಬೇರ್ಪಡುತ್ತಿದ್ದಂತೆ ಡೆಲ್ಲಿ ತಂಡದ ರನ್ಗತಿ ಇಳಿಮುಖವಾಯಿತು. ರೋವ್ಮನ್ ಪೊವೆಲ್ 10 ಎಸೆತಗಳಲ್ಲಿ 3 ರನ್ಗಳಿಸಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ರಿಷಭ್ ಪಂತ್ ಕೂಡ ರನ್ಗಳಿಸಲು ಪರದಾಟ ನಡೆಸಿದರು. ಅವರು ಮೊದಲ 20 ಎಸೆತಗಳಲ್ಲಿ ಕೇವಲ 14 ರನ್ಗಳಿಸಿದ್ದರು, ಆದರೆ ಕೊನೆ 4 ಓವರ್ಗಳಿದ್ದ ಸಂದರ್ಭದಲ್ಲಿ ಸರ್ಫರಾಜ್ ಖಾನ್ ಜೊತೆಗೂಡಿ ಬಿರುಸಿನ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು 150ರ ಸನಿಹ ತಂದರು.
ಪಂತ್ 36 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 39 ರನ್ಗಳಿಸಿದರೆ, ಸರ್ಫರಾಜ್ ಖಾನ್ 28 ಎಸೆತಗಳಲ್ಲಿ 3 ಬೌಂಡರಿ ಸಹಿತ 36 ರನ್ಗಳಿಸಿ ಅಜೇಯರಾಗುಳಿದರು. ಲಖನೌ ಸೂಪರ್ ಜೈಂಟ್ಸ್ ಪರ ರವಿ ಬಿಷ್ಣೋಯ್ 22ಕ್ಕೆ 2, ಕೆ.ಗೌತಮ್ 23ಕ್ಕೆ 1ವಿಕೆಟ್ ಪಡೆದರು.
ಇದನ್ನೂ ಓದಿ:ಧೋನಿ ನಟಿಸಿರುವ ಐಪಿಎಲ್ ಪ್ರೋಮೋ ಪ್ರಸಾರಕ್ಕೆ ತಡೆ: ಇದೇ ಪ್ರಮುಖ ಕಾರಣ?