ಹೈದರಾಬಾದ್: 2022ರ ಐಪಿಎಲ್ ಟೂರ್ನಿ ಆರಂಭಗೊಳ್ಳುವುದಕ್ಕೂ ಕೇವಲ ಎರಡು ದಿನ ಮುಂಚಿತವಾಗಿ ಸಿಎಸ್ಕೆ ತಂಡದ ನಾಯಕತ್ವವನ್ನ ಮಹೇಂದ್ರ ಸಿಂಗ್ ಧೋನಿ ಸಹ ಆಟಗಾರ ರವೀಂದ್ರ ಜಡೇಜಾ ಹೆಗಲಿಗೆ ಹಸ್ತಾಂತರ ಮಾಡಿ, ತಾವು ತಂಡದಲ್ಲಿ ಕೇವಲ ಆಟಗಾರನಾಗಿ ಮುಂದುವರೆಯುವುದಾಗಿ ಹೇಳಿದ್ದರು. ಆದರೆ, ಇದೀಗ ನಾಯಕತ್ವ ಅವರನ್ನ ಮತ್ತೊಮ್ಮೆ ಹುಡುಕಿಕೊಂಡು ಬಂದಿದೆ.
40 ವರ್ಷದ ಮಹೇಂದ್ರ ಸಿಂಗ್ ಧೋನಿಗೆ ಮತ್ತೊಮ್ಮೆ ಚೆನ್ನೈ ತಂಡದ ನಾಯಕತ್ವ ಜವಾಬ್ದಾರಿ ಸಿಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಸಂದೇಶಗಳು ಹರಿದಾಡ್ತಿವೆ. ಅದರಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಜನಪ್ರಿಯ ಡೈಲಾಗ್ವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಇದನ್ನೂ ಓದಿ:ಧೋನಿಗೆ ಸಿಎಸ್ಕೆ ನಾಯಕತ್ವ ಬಿಟ್ಟುಕೊಟ್ಟ ಜಡೇಜಾ.. ಕಾರಣ?
ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಯಶ್ ಅವರ ವೈಲೆನ್ಸ್ ವೈಲೆನ್ಸ್.. ಡೈಲಾಗ್ ಇದೀಗ ಧೋನಿ ವಿಷಯದಲ್ಲೂ ಬಳಕೆಯಾಗ್ತಿದೆ. ಕೆಲವರು ಧೋನಿ ಚಿತ್ರಕ್ಕೆ 'ಕ್ಯಾಪ್ಟನ್ಸಿ ಕ್ಯಾಪ್ಟನ್ಸಿ ಕ್ಯಾಪ್ಟನ್ಸಿ..ಐ ಅವಾಯ್ಡ್, ಬಟ್ ಕ್ಯಾಪ್ಟನ್ಸಿ ಲೈಕ್ಸ್ ಮಿ.. ಐ ಕಾಂಟ್ ಅವಾಯ್ಡ್..' ಎಂಬ ಶೀರ್ಷಿಕೆ ಹಾಕಿಕೊಂಡಿದ್ದಾರೆ. ಮತ್ತೆ ಕೆಲವರು 'ವೆಲ್ಕಮ್ ಬ್ಯಾಕ್ ಕೂಲ್ ಕ್ಯಾಪ್ಟನ್' ಎಂದು ಹೇಳಿದ್ದಾರೆ. ಇದರ ಮಧ್ಯೆ ಕೆಲವರು ರವೀಂದ್ರ ಜಡೇಜಾ ತಮ್ಮ ನಾಯಕತ್ವ ಹಸ್ತಾಂತರ ಮಾಡಿದ್ರಾ ಅಥವಾ ಫ್ರಾಂಚೈಸಿ ಅವರನ್ನ ಕೆಳಗಿಸ್ತಾ? ಎಂಬ ಪ್ರಶ್ನೆ ಸಹ ಮಾಡಿದ್ದಾರೆ.
ಟೀಂ ಇಂಡಿಯಾ ಮಾಜಿ ಆಟಗಾರರಾದ ವಾಸೀಂ ಜಾಫರ್, ಪಾರ್ಥಿವ್ ಪಟೇಲ್ ಕೂಡ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 2008ರಿಂದಲೂ 2021ರವರೆಗೆ ಚೆನ್ನೈ ತಂಡದ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದ ಧೋನಿ, ಈ ಸಲದ ಟೂರ್ನಿಯಲ್ಲಿ ಆಲ್ರೌಂಡರ್ ಜಡೇಜಾಗೆ ಈ ಜವಾಬ್ದಾರಿ ನೀಡಿದ್ದರು.