ಹೈದರಾಬಾದ್: ಭಾರತದ ಭರವಸೆಯ ಬ್ಯಾಟರ್ಗಳಲ್ಲಿ ಒಬ್ಬರಾಗಿರುವ ಕನ್ನಡಿಗ ಮನೀಶ್ ಪಾಂಡೆ 2022ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಸಲಿರುವ ಟಾಪ್ ಆಟಗಾರರಲ್ಲಿ ಒಬ್ಬರಾಗಬಹುದು ಎನ್ನಲಾಗುತ್ತಿದ್ದು, ಅವರೇ ವಿರಾಟ್ ಕೊಹ್ಲಿಯಿಂದ ತೆರವಾಗಿರುವ ನಾಯಕತ್ವದ ಪ್ರಬಲ ಸ್ಪರ್ಧಿ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಿರಂತರ ಅವಕಾಶಗಳ ಕೊರತೆ, ಸಿಕ್ಕ ಅವಕಾಶಗಳಲ್ಲಿ ಒತ್ತಡಕ್ಕೆ ಸಿಲುಕಿ ಉತ್ತಮ ಪ್ರದರ್ಶನ ತೋರಲು ವಿಫಲರಾಗಿ ಭಾರತ ತಂಡದಿಂದ ಹೊರಬಿದ್ದಿರುವ ಮನೀಶ್ ಪಾಂಡೆ ಇತ್ತೀಚಿನ ದೇಶಿ ಟೂರ್ನಿ ವಿಜಯ ಹಜಾರೆಯಲ್ಲಿ 279 ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲಿ 272 ರನ್ಗಳಿಸಿ ಮಿಂಚಿದ್ದರು. ಅಲ್ಲದೇ ಕರ್ನಾಟಕ ತಂಡವನ್ನು ಫೈನಲ್ಗೇರಿಸುವಲ್ಲಿ ಯಶಸ್ವಿಯಾಗಿದ್ದರು.
ಮನೀಶ್ ಪಾಂಡೆ 2009ರಲ್ಲಿ ಬೆಂಗಳೂರು ಫ್ರಾಂಚೈಸಿ ಪರ ಆಡಿ ಫೈನಲ್ ಪ್ರವೇಶಿಸಲು ನಿರ್ಣಾಯಕ ಪಾತ್ರವಹಿಸಿದ್ದರು. ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ಹೊಂದಿರುವ ಮನೀಶ್ ನಂತರ ಪುಣೆ ವಾರಿಯರ್ಸ್, ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳ ಪರ ಆಡಿದ್ದರು. 2014ರಲ್ಲಿ ಕೆಕೆಆರ್ ಪರ ಫೈನಲ್ನಲ್ಲಿ 94 ರನ್ ಸಿಡಿಸಿ ಫ್ರಾಂಚೈಸಿ ಚಾಂಪಿಯನ್ ಆಗಲು ನೆರವಾಗಿದ್ದರು.