ಲಖನೌ :ಇಂಡಿಯನ್ ಪ್ರೀಮಿಯರ್ ಲೀಗ್ನ ನೂತನ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್ 2022ರ ಮೆಗಾ ಹರಾಜಿಗೂ ಮುನ್ನ ಸೋಮವಾರ ತನ್ನ ಲೋಗೋವನ್ನು ಬಿಡುಗಡೆ ಮಾಡಿದೆ.
ಲೋಗೋ ಗರುಡ ಆಕಾರದಲ್ಲಿ ಅದರ ರೆಕ್ಕೆಗಳು ಕೇಸರಿ, ಬಿಳಿ ಮತ್ತು ಹಸಿರು ಬಣ್ಣ ಹೊಂದಿವೆ. ದೇಹ ಮತ್ತು ಮುಖದ ಜಾಗದಲ್ಲಿ ಕ್ರಿಕೆಟ್ ಬ್ಯಾಟ್ ಹೊಂದಿದ್ದು, ನೀಲಿ ಬಣ್ಣದಲ್ಲಿದೆ. ಇದು ಪ್ರಾಚೀನ ಭಾರತೀಯ ಪುರಾಣಗಳಿಂದ ಸ್ಪೂರ್ತಿ ಪಡೆಯುತ್ತದೆ ಎಂದು ಫ್ರಾಂಚೈಸಿ ಹೇಳಿದೆ.
"ಈ ಪೌರಾಣಿಕ ಪಕ್ಷಿ ಗರುಡ ರಕ್ಷಕ ಮತ್ತು ವೇಗವಾಗಿ ಚಲಿಸುವ ಶಕ್ತಿಯೊಂದಿಗೆ ಸಿಂಹಾಸನಾರೂಢವಾಗಿದೆ. ಹಾಗಾಗಿ, ಅದರ ರೆಕ್ಕೆಯನ್ನು, ಲಾಂಛನವನ್ನು ರಚಿಸಲು ನಮಗೆ ಸ್ಫೂರ್ತಿ ನೀಡಿದೆ. ಗರುಡ ಪ್ರತಿ ಭಾರತೀಯ ಸಂಸ್ಕೃತಿ ಮತ್ತು ಉಪಸಂಸ್ಕೃತಿಯಲ್ಲಿ ಸರ್ವವ್ಯಾಪಿಯಾಗಿದೆ" ಎಂದು LSGತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕಳೆದ ಅಕ್ಟೋಬರ್ನಲ್ಲಿ ನಡೆದಿದ್ದ ಬಿಡ್ನಲ್ಲಿ ಉದ್ಯಮಿ ಸಂಜೀವ್ ಗೋಯಂಕಾ ನೇತೃತ್ವದ RPSG ಗ್ರೂಪ್ ಬರೋಬ್ಬರಿ 7090 ಕೋಟಿ ರೂ. ವಿನಿಯೋಗಿಸಿ ಲಖನೌ ಫ್ರಾಂಚೈಸಿಯನ್ನು ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ತಂಡ ಎಂಬ ಖ್ಯಾತಿಗೂ ಪಾತ್ರವಾಗಿತ್ತು.
ಈ ದುಬಾರಿ ತಂಡ ಈಗಾಗಲೇ ಭಾರತ ತಂಡದ ಸ್ಟಾರ್ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ದಾಖಲೆಯ 17 ಕೋಟಿ ರೂ. ನೀಡಿ ಡ್ರಾಫ್ಟ್ ಮಾಡಿಕೊಂಡಿದೆ. ಅವರನ್ನೇ ನಾಯಕನನ್ನಾಗಿ ನೇಮಿಸಿದೆ. ಇವರ ಜೊತೆಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಮತ್ತು ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಕ್ರಮವಾಗಿ 9.5 ಮತ್ತು 4 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿತ್ತು.
ಇದನ್ನೂ ಓದಿ:ರೋಹಿತ್ ಸೂಕ್ತ, ರಹಾನೆ ಉತ್ತಮ.. ಆದ್ರೆ ರಾಹುಲ್ಗೆ ಟೆಸ್ಟ್ ನಾಯಕತ್ವದ ಗುಣಗಳಿಲ್ಲ: ಪಾಂಟಿಂಗ್