ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲಾರ್ಧ ಮುಗಿದು ದ್ವಿತಿಯಾರ್ಧ ಆರಂಭವಾಗಿದೆ. ಐಪಿಎಲ್ನ ಯಶಸ್ವಿ ತಂಡಗಳೆಂದು ಗುರುತಿಸಿಕೊಂಡ ತಂಡಗಳು ಅಂಕಪಟ್ಟಿಯಲ್ಲಿ ತಳದಲ್ಲಿದ್ದರೆ, ಸಾಧಾರಣ ತಂಡಗಳೆಂದು ಭಾವಿಸಿದ್ದ ತಂಡಗಳು ಅಮೋಘ ಪ್ರದರ್ಶನ ತೋರಿ ಪ್ಲೇ ಆಫ್ ಪ್ರವೇಶಿಸುವ ನೆಚ್ಚಿನ ತಂಡಗಳಾಗಿ ಕಾಣಿಸಿಕೊಂಡಿವೆ. ಇದು ಕೇವಲ ತಂಡಗಳಿಗೆ ಮಾತ್ರವಲ್ಲ, ಹರಾಜಿನಲ್ಲಿ ಕೋಟಿಗಟ್ಟಲೆ ವೆಚ್ಚ ಮಾಡಿ ಖರೀದಿಸಿದ ಕೆಲವು ಆಟಗಾರರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿ ಫ್ರಾಂಚೈಸಿ ನಂಬಿಕೆ ಹುಸಿಗೊಳಿಸಿದ್ದಾರೆ.
ಇಶಾನ್ ಕಿಶನ್: (15.25 ಕೋಟಿ ರೂ):2022ರ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಮೇಲೆ ಸಾಕಷ್ಟು ತಂಡಗಳು ಕಣ್ಣಿಟ್ಟಿದ್ದವು. ಕಳೆದ ಮೂರು ವರ್ಷಗಳಿಂದ ಉತ್ತಮವಾಗಿ ರನ್ಗಳಿಸುತ್ತಿದ್ದ 22 ವರ್ಷದ ಯುವ ವಿಕೆಟ್ ಕೀಪರ್ ಬ್ಯಾಟರ್ನನ್ನು ಮುಂಬೈ ಇಂಡಿಯನ್ಸ್ 15.25 ಕೋಟಿ ರೂ. ವ್ಯಯ ಮಾಡಿ ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ಆದರೆ ಯುವ ಆರಂಭಿಕ ಬ್ಯಾಟರ್ ಮೊದಲೆರಡು ಪಂದ್ಯಗಳನ್ನು ಬಿಟ್ಟರೆ ಉಳಿದ ಪಂದ್ಯಗಳಲ್ಲಿ 100ರ ಸ್ಟ್ರೈಕ್ರೇಟ್ನಲ್ಲೂ ರನ್ಗಳಿಸಲು ಪರದಾಡುತ್ತಿದ್ದಾರೆ. ಜಾರ್ಖಂಡ್ ಬ್ಯಾಟರ್ 8 ಪಂದ್ಯಗಳಿಂದ ಕೇವಲ 199 ರನ್ಗಳಿಸಿದ್ದಾರೆ.
ಶಾರ್ದೂಲ್ ಠಾಕೂರ್(10.75 ಕೋಟಿ.ರೂ): ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ತಂಡದ ಖಾಯಂ ಸದಸ್ಯನಾಗಿದ್ದ ಶಾರ್ದೂಲ್ ಠಾಕೂರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 10.75 ಕೋಟಿ ರೂ ನೀಡಿ ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ಆದರೆ ಠಾಕೂರ್ 7 ಪಂದ್ಯಗಳಿಂದ ಕೇವಲ 4 ವಿಕೆಟ್ ಮಾತ್ರ ಪಡೆದಿದ್ದಾರೆ.
ಶಾರುಖ್ ಖಾನ್(9 ಕೋಟಿ.ರೂ): ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ ಶಾರುಖ್ರನ್ನು 9 ಕೋಟಿ ರೂ ನೀಡಿ ಪಂಜಾಬ್ ಕಿಂಗ್ಸ್ ವಾಪಸ್ ತಂಡ ಖರೀದಿಸಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆ ಪಡೆದ 2ನೇ ಅನ್ಕ್ಯಾಪ್ಡ್ ಪ್ಲೇಯರ್ ಎನಿಸಿಕೊಂಡಿದ್ದ ತಮಿಳುನಾಡಿನ ಶಾರುಖ್ ಖಾನ್ ಈ ಬಾರಿಯ ಐಪಿಎಲ್ನಲ್ಲಿ 7 ಪಂದ್ಯಗಳಲ್ಲಿ ಕೇವಲ 98 ರನ್ಗಳಿಸಿದ್ದಾರೆ.