ಮುಂಬೈ: ಕುಲದೀಪ್ ಯಾದವ್ ಮತ್ತು ಮುಸ್ತಫಿಝುರ್ ರಹಮಾನ್ ಅವರ ಬೌಲಿಂಗ್ ಮತ್ತು ಡೇವಿಡ್ ವಾರ್ನರ್- ರೋವ್‌ಮನ್ ಪೊವೆಲ್ ಅವರ ಬಿರುಸಿನ ಬ್ಯಾಟಿಂಗ್ನಿಂದಾಗಿ ದೆಹಲಿ ಕ್ಯಾಪಿಟಲ್ಸ್ ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಒಟ್ಟು ಆಡಿರುವ ಎಂಟು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಇದು ನಾಲ್ಕನೇ ಗೆಲುವಾಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆಕೆಆರ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿಯಾಯಿತು. ಮುಸ್ತಫಿಝುರ್ ರಹಮಾನ್, ಕುಲದೀಪ್ ಯಾದವ್ ಅವರ ಬೌಲಿಂಗ್ಗೆ ತತ್ತರಿಸಿದ ಕೆಕೆಆರ್ ತಂಡ ಎಲ್ಲ ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲು ಸಾಧ್ಯವಾಯಿತು. ಬೌಲಿಂಗ್ ದಾಳಿ ಮಾರಕವಾಗಿದ್ದರೂ, ಶ್ರೇಯಸ್ ಅಯ್ಯರ್ 37 ಎಸೆತಗಳಲ್ಲಿ 42, ನಿತೀಶ್ ರಾಣಾ 34 ಎಸೆತಗಳಲ್ಲಿ 57, ರಿಂಕು ಸಿಂಗ್ 16 ಎಸೆತಗಳಲ್ಲಿ 23 ರನ್ ಗಳಿಸಲು ಶಕ್ತರಾದರೆ, ಇನ್ನುಳಿದವರು ಎರಡಂಕಿಯ ರನ್ ಗಳಿಸಲು ಸಾಧ್ಯವಾಗಲಿಲ್ಲ.
ಡೆಲ್ಲಿ ಪರ ಕುಲದೀಪ್ ಯಾದವ್ ಮೂರು ಓವರ್ಗಳಲ್ಲಿ 14 ರನ್ ನೀಡಿ 4 ವಿಕೆಟ್ ಪಡೆದರೆ, ಮತ್ತೋರ್ವ ಬೌಲರ್ ಮುಸ್ತಫಿಜುರ್ ರಹಮಾನ್ 4 ಓವರ್ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದು, ಕೆಕೆಆರ್ ತಂಡವನ್ನು ಕಟ್ಟಿ ಹಾಕಿದರು. ಇದರ ಜೊತೆಗೆ ಚೇತನ್ ಸಕರಿಯಾ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.