ಮುಂಬೈ:ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜಾಸ್ ಬಟ್ಲರ್ 2022ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಮೋಘ ಫಾರ್ಮ್ನಲ್ಲಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ 3 ಶತಕ ಮತ್ತು 2 ಅರ್ಧಶತಕಗಳ ಸಹಿತ 491 ರನ್ಗಳಿಸಿದ್ದಾರೆ.
ಈಗಾಗಲೇ 15ನೇ ಆವೃತ್ತಿಯಲ್ಲಿ 3 ಶತಕ ಪೂರ್ಣಗೊಳಿಸಿರುವ ಇಂಗ್ಲೆಂಡ್ ಮೂಲದ ಬ್ಯಾಟರ್ ಇನ್ನೂ ಟೂರ್ನಿಯಲ್ಲಿ ಕಡಿಮೆ ಅಂದರೂ 8ರಿಂದ 9 ಪಂದ್ಯಗಳನ್ನಾಡಲಿದ್ದಾರೆ. ಹಾಗಾಗಿ ಡ್ರೀಮ್ ಫಾರ್ಮ್ನಲ್ಲಿರುವ ಬಟ್ಲರ್ ಖಂಡಿತ ಐಪಿಎಲ್ ಆವೃತ್ತಿವೊಂದರಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆಗೆ ಪಾತ್ರರಾಗುವ ಅವಕಾಶವಿದೆ.
2016ರಲ್ಲಿ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 4 ಶತಕ ಸಿಡಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿದೆ. ಇನ್ನು ಗರಿಷ್ಠ ರನ್ಗಳಿಸಿರುವ ದಾಖಲೆ ಕೂಡ ಇವರ ಹೆಸರಿನಲ್ಲಿಯೇ ಇದ್ದು, ಟೀಮ್ ಇಂಡಿಯಾ ಮಾಜಿ ನಾಯಕ 973 ರನ್ಗಳಿಸಿದ್ದಾರೆ.
ಪ್ರಸ್ತುತ 7 ಪಂದ್ಯಗಳಿಂದ ಬಟ್ಲರ್ 491 ರನ್ಗಳಿಸಿದ್ದಾರೆ. ವಿರಾಟ್ ಕೊಹ್ಲಿ ದಾಖಲೆ ಮುರಿಯಲು ರಾಜಸ್ಥಾನ್ ರಾಯಲ್ಸ್ ಬ್ಯಾಟರ್ಗೆ ಇನ್ನೂ 482 ರನ್ಗಳ ಅವಶ್ಯಕತೆಯಿದೆ. ಲೀಗ್ನಲ್ಲಿ 7 ಪಂದ್ಯಗಳಿವೆ ಮತ್ತು ರಾಯಲ್ಸ್ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಹೆಚ್ಚಿರುವುದರಿಂದ ಪ್ಲೇ ಆಫ್ ಪಂದ್ಯಗಳು ಸೇರಿದಂತೆ 8ರಿಂದ 9 ಪಂದ್ಯಗಳ ಸಿಗಲಿದ್ದು ಐಪಿಎಲ್ನಲ್ಲಿ 1000 ರನ್ಗಳಿಸುವ ಅವಕಾಶ ಕೂಡ ಬಟ್ಲರ್ಗಿದೆ.
2016ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿರುವ ಜಾಸ್ ಬಟ್ಲರ್ 72 ಪಂದ್ಯಗಳನ್ನಾಡಿದ್ದು, 2459 ರನ್ಗಳಿಸಿದ್ದಾರೆ. ಒಟ್ಟಾರೆ 4 ಶತಕ ಸಿಡಿಸಿದ್ದು, ಗರಿಷ್ಠ ಶತಕ ಸಿಡಿಸಿದ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ 6, ವಿರಾಟ್ ಕೊಹ್ಲಿ 5, ಶೇನ್ ವಾಟ್ಸನ್ ಮತ್ತು ಡೇವಿಡ್ ವಾರ್ನರ್ ತಲಾ 4 ಶತಕ ಸಿಡಿಸಿದ್ದಾರೆ.
ಇದನ್ನೂ ಓದಿ:ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್: ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ದಹಿಯಾ