ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ನ 2022ನೇ ಸಾಲಿನ ಆವೃತ್ತಿಗೋಸ್ಕರ ಬಿಸಿಸಿಐ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಶುರು ಮಾಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಂದಿನ ವರ್ಷ ಏಪ್ರಿಲ್ 2ರಿಂದ ಐಪಿಎಲ್ 2022ರ ಆವೃತ್ತಿ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.
2022ರ ಐಪಿಎಲ್ಗೋಸ್ಕರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, 8 ಪ್ರಾಂಚೈಸಿಗಳು ಕೇವಲ ನಾಲ್ವರು ಆಟಗಾರರನ್ನು ರಿಟೈನ್ ಮಾಡಲು ಅವಕಾಶ ನೀಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಿಎಸ್ಕೆ ಮುಂದಿನ ಮೂರು ಸೀಸನ್ಗಳಿಗಾಗಿ ಧೋನಿ ಅವರನ್ನು ರಿಟೈನ್ ಮಾಡಿಕೊಳ್ಳಲಿದ್ದು, ಇದರ ಜೊತೆಗೆ 2021ರ ಐಪಿಎಲ್ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿರುವ ಜಡೇಜಾ ಮತ್ತು ಗಾಯಕ್ವಾಡ್ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆಂದು ತಿಳಿದು ಬಂದಿದೆ. ಇದರ ಜೊತೆಗೆ, ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ ಅಥವಾ ಮಧ್ಯಮ ವೇಗಿ ಸ್ಯಾಮ್ ಕರ್ರನ್ಗೆ ಮಣೆ ಹಾಕಲಿದೆ. ಇದೇ ಮೊದಲ ಸಲ ಸುರೇಶ್ ರೈನಾ ಅವರನ್ನು ಕೈಬಿಡಲು ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್, ಆಲ್ರೌಂಡರ್ ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ವೇಗಿ ಅನ್ರಿಚ್ ನಾರ್ಟ್ಜೆ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಶ್ರೇಯಸ್ ಅಯ್ಯರ್ಗೆ ತಂಡ ಕೈಬಿಡುವ ಸಾಧ್ಯತೆ ಇದೆ.