ನಾಳೆಯಿಂದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 15 ನೇ ಆವೃತ್ತಿ ಆರಂಭವಾಗಲಿದೆ. ಲೀಗ್ ಮತ್ತು ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ನಾಯಕತ್ವದಂತಹ ಮಹತ್ವದ ಜವಾಬ್ದಾರಿ ವಹಿಸಿಕೊಂಡಿರುವ ರವೀಂದ್ರ ಜಡೇಜಾ(ಸಿಎಸ್‌ಕೆ), ಫಾಫ್ ಡು ಪ್ಲೆಸಿಸ್(ಆರ್ಸಿಬಿ), ಹಾರ್ದಿಕ್ ಪಾಂಡ್ಯಾ( ಗುಜರಾತ್ ಟೈಟನ್ಸ್), ಮಯಾಂಕ್ ಅಗರ್ವಾಲ್(ಪಂಜಾಬ್ ಕಿಂಗ್ಸ್) ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಅಲ್ಲದೇ ಈ ಐಪಿಎಲ್ ಭಾರತ ತಂಡದ ಮುಂದಿನ ನಾಯಕನ ಹುಡುಕಾಟಕ್ಕೂ ವೇದಿಕೆ ಒದಗಿಸಿದೆ.
ಹಾರ್ದಿಕ್ ಪಾಂಡ್ಯ, ಗುಜರಾತ್ ಟೈಟಾನ್ಸ್
ಗುಜರಾತ್ ಟೈಟಾನ್ಸ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾ ಭಾರತ ತಂಡದ ಆಲ್ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಈ ಆವೃತ್ತಿಯ ಐಪಿಎಲ್ ಮೂಲಕ ಇದೇ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೊದಲ ಬಾರಿಗೆ ಐಪಿಎಲ್ನಲ್ಲಿ ಪಾಲ್ಗೊಂಡಿರುವ ಗುಜರಾತ್ ಟೈಟಾನ್ಸ್ ತಂಡ ಹಾರ್ದಿಕ್ಗೆ ಮಹತ್ತರ ಜಬಾಬ್ದಾರಿ ವಹಿಸಿದೆ. ತಂಡವನ್ನು ಹಾರ್ದಿಕ್ ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಪ್ರಮುಖವಾಗಿದೆ. ಕಾರಣ ಗಾಯದ ಕಾರಣದಿಂದ ಹಲವು ತಿಂಗಳಿಂದ ಹಾರ್ದಿಕ್ ಕ್ರಿಕೆಟ್ನಿಂದ ದೂರವುಳಿದಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡ ಹಾರ್ದಿಕ್ ಪಾಂಡ್ಯಾರನ್ನು 15 ಕೋಟಿ ರೂಪಾಯಿಗೆ ಖರೀದಿಸಿದೆ. ಅಲ್ಲದೇ, ಶುಬ್ಮನ್ ಗಿಲ್ (8 ಕೋಟಿ), ರಾಹುಲ್ ತೆವಾಟಿಯಾ (9 ಕೋಟಿ), ಲೂಕಿ ಫರ್ಗುಸನ್ (10 ಕೋಟಿ) ಅವರಂತಹ ಪ್ರತಿಭೆಗಳನ್ನು ಹೊಂದಿದೆ. ಭಾರತ ತಂಡದ ಮಾಜಿ ಬೌಲರ್ ಆಶಿಶ್ ನೆಹ್ರಾ ತಂಡದ ಮುಖ್ಯ ಕೋಚ್ ಆಗಿದ್ದಾರೆ. ತನ್ನ ಚೊಚ್ಚಲ ಅಭಿಯಾನವನ್ನು ಹಾರ್ದಿಕ್ ಮತ್ತು ತಂಡ ಹೇಗೆ ಶುರು ಮಾಡಲಿದೆ ಎಂಬುದು ಎಲ್ಲರ ನಿರೀಕ್ಷೆ.
ಫಾಫ್ ಡು ಪ್ಲೆಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ಫಾಫ್ ಡು ಪ್ಲೆಸಿಸ್ 9 ವರ್ಷಗಳಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕರಾಗಿದ್ದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿಯಿಂದ ತೆರವಾದ ನಾಯಕತ್ವವನ್ನು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ವಹಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿದ್ದ ಪ್ಲೆಸಿಸ್ ಹರಾಜಿನಲ್ಲಿ 7 ಕೋಟಿ ರೂಪಾಯಿ ನೀಡಿ ಖರೀದಿಸಲಾಗಿದೆ. ಅಲ್ಲದೇ, ತಂಡ ಈವರೆಗೂ ಒಂದೇ ಒಂದು ಸಲವೂ ಟ್ರೋಫಿ ಗೆದ್ದುಕೊಂಡಿಲ್ಲ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ತಂಡದ ನಾಯಕನಾಗಿರುವ ಪ್ಲೆಸಿಸ್ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇದಲ್ಲದೇ, ತಂಡದಲ್ಲಿ ಟಿ-20 ಸ್ಪೆಷಲಿಸ್ಟ್ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ರಂತಹ ಬಳಗವಿದೆ.
ಮಯಾಂಕ್ ಅಗರ್ವಾಲ್, ಪಂಜಾಬ್ ಕಿಂಗ್ಸ್
ಪಂಜಾಬ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡ ಕನ್ನಡದ ತಂಡದಂತಾಗಿದೆ. ಅದರ ನಾಯಕ ಮತ್ತು ಕೋಚ್ ಕನ್ನಡಿಗರು. ಇದೇ ಮೊದಲ ಬಾರಿಗೆ ಮಯಾಂಕ್ ಅಗರ್ವಾಲ್ ನಾಯಕನ ಸ್ಥಾನ ಅಲಂಕರಿಸಿದ್ದರೆ, ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಕೋಚ್ ಹುದ್ದೆ ಮುಂದುವರಿಸಿದ್ದಾರೆ. ಮಯಾಂಕ್ನನ್ನು ತಂಡ 12 ಕೋಟಿ ರೂ. ನೀಡಿ ಖರೀದಿಸಿ ನಾಯಕನ ಪಟ್ಟ ಕಟ್ಟಿದೆ. 2014 ರಲ್ಲಿ ಫೈನಲ್ಗೆ ತಲುಪಿದ್ದ ತಂಡ ಮಯಾಂಕ್ ನೇತೃತ್ವದಲ್ಲಿ ಟ್ರೋಫಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ತಂಡದಲ್ಲಿ ಶಾರುಖ್ ಖಾನ್, ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಓಡಿಯನ್ ಸ್ಮಿತ್ರಂತಹ ಪವರ್ ಹಿಟ್ಟರ್‌ಗಳಿದ್ದಾರೆ.
ರವೀಂದ್ರ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜಾ ಐಪಿಎಲ್ ಚರಿತ್ರೆಯಲ್ಲಿ ಅತಿಹೆಚ್ಚು ಯಶಸ್ವಿಯಾದ ತಂಡ ಎಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್. 4 ಬಾರಿಯ ಲೀಗ್ ಚಾಂಪಿಯನ್ ಆಗಿರುವ ತಂಡದ ಶಕ್ತಿಯಾಗಿದ್ದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಸಿಎಸ್‌ಕೆ ನಾಯಕತ್ವದಿಂದ ಹಿಂದೆ ಸರಿದು ರವೀಂದ್ರ ಜಡೇಜಾಗೆ ಪಟ್ಟ ಕಟ್ಟಿದ್ದಾರೆ. ಜಡೇಜಾ ಇದೇ ಮೊದಲ ಬಾರಿಗೆ ಯಶಸ್ವಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇದು ಅವರ ಮೇಲೆ ಜವಾಬ್ದಾರಿಯ ಜತೆಗೆ ಒತ್ತಡವನ್ನೂ ಬೀರಿದೆ. ಜಡೇಜಾ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಜಡೇಜಾರನ್ನು ತಂಡ 16 ಕೋಟಿ ರೂ. ನೀಡಿ ಹರಾಜಿಗೂ ಮುನ್ನವೇ ಉಳಿಸಿಕೊಂಡಿತ್ತು. ವೃತ್ತಿಜೀವನದ ಉತ್ತುಂಗದಲ್ಲಿರುವ ಜಡೇಜಾ ಸಿಎಸ್‌ಕೆ ಯಶೋಗಾಥೆಯನ್ನು ಮುಂದುವರಿಸುತ್ತಾರಾ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ
ಈ ಆವೃತ್ತಿಯಲ್ಲಿ ಹೊಸ ಫ್ರಾಂಚೈಸಿಯಾಗಿ ಸ್ಥಾನ ಪಡೆದಿರುವ ಲಖನೌ ಸೂಪರ್ ಜೈಂಟ್ಸ್ ಕೆ.ಎಲ್.ರಾಹುಲ್ಗೆ ನಾಯಕತ್ವದ ಜವಾಬ್ದಾರಿ ನೀಡಿದೆ. ರಾಹುಲ್ ಈ ಹಿಂದೆ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ನಾಳೆಯಿಂದ ವಿಧ್ಯುಕ್ತ ಚಾಲನೆ ಪಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೆಣಸಾಟ ನಡೆಸಲಿವೆ.
ಇದನ್ನೂ ಓದಿ:ಧೋನಿ ನಾಯಕತ್ವದಲ್ಲಿ ಆಡುವುದೇ ಅದೃಷ್ಟ: ಫಾಫ್ ಡು ಪ್ಲೆಸಿಸ್