ಅಬುಧಾಬಿ: ಗುರುವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದ್ದು, ಆದರೂ ಕೊನೆಗೆ ಜಯಗಳಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ನಾವು ಆಟವನ್ನು ಚೆನ್ನಾಗಿಯೇ ಆರಂಭಿಸಿದ್ದೆವು ಆದರೆ, ಕೊನೆ ವೇಳೆಗೆ ಸಾಕಷ್ಟು ರನ್ಗಳಿಸಲು ಸಾಧ್ಯವಾಗಲಿಲ್ಲ. ಜೊತೆಗೆ ಆರಂಭದಲ್ಲಿ ನಾವು ಚೆನ್ನಾಗಿ ಬೌಲಿಂಗ್ ಕೂಡ ಮಾಡಲಿಲ್ಲ ಎಂದು ರೋಹಿತ್ ಪಂದ್ಯದ ಸೋಲಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ ಮೊದಲ ಬ್ಯಾಟರ್
ವೆಂಕಟೇಶ್ ಅಯ್ಯರ್ (53) ಮತ್ತು ರಾಹುಲ್ ತ್ರಿಪಾಠಿ (ಅಜೇಯ 74) ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಅಬ್ಬರಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಹದಿನಾಲ್ಕನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಚರಣದಲ್ಲಿ ಬ್ಯಾಕ್ ಟು ಬ್ಯಾಕ್ ಜಯ ದಾಖಲಿಸಿದೆ.
ಐಪಿಎಲ್ 2021 ಟೂರ್ನಿಯ 34ನೇ ಲೀಗ್ ಪಂದ್ಯದಲ್ಲಿ ಗೆಲುವಿಗೆ 156 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇನ್ನು 29 ಎಸೆತಗಳು ಬಾಕಿ ಇರುವಾಗಲೇ ಕೇವಲ 3 ವಿಕೆಟ್‌ಗಳ ನಷ್ಟದಲ್ಲಿ 159 ರನ್ ಚೆಚ್ಚಿ ಜಯದ ಸಂಭ್ರಮ ಆಚರಿಸಿತು. ಇದರೊಂದಿಗೆ ನೆಟ್ ರನ್‌ರೇಟ್ ಕೂಡ ಸುಧಾರಿಸಿಕೊಂಡಿರುವ ಕೆಕೆಆರ್ ಅಂಕಪಟ್ಟಿಯಲ್ಲಿ 2 ಸ್ಥಾನ ಮೇಲೇರಿ ಟಾಪ್ 4ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ.