ದುಬೈ: ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ 2ನೇ ಆವೃತ್ತಿಯ ಐಪಿಎಲ್ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬುಧವಾರ ದುಬೈ ತಲುಪಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳುವ ಮುನ್ನ ಹೋಟೆಲ್ನಲ್ಲಿ 6 ದಿನಗಳ ಕ್ವಾರಂಟೈನ್ಗೆ ಒಳಗಾಗಲಿದ್ದಾರೆ.
2020ರ ಐಪಿಎಲ್ ರನ್ನರ್ ಅಪ್ ಆಗಿರುವ ಡೆಲ್ಲಿ ಫ್ರಾಂಚೈಸಿ 32 ವರ್ಷದ ಆಸೀಸ್ ಸ್ಟಾರ್ ಹೋಟೆಲ್ ಪ್ರವೇಶಿಸುವ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. "ನೋಡಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ಸೇರಲು ಯಾರು ಆಗಮಿಸುತ್ತಿದ್ದಾರೆ. ಯುಎಇಗೆ ಸ್ವಾಗತ ಸ್ಮಿತ್, ನಿಮ್ಮನ್ನು ನಮ್ಮ ಜೊತೆಗೆ ಸೇರಿಸಿಕೊಳ್ಳಲು ಕಾಯಲು ಸಾಧ್ಯವಾಗುತ್ತಿಲ್ಲ" ಎಂದು ಬರೆದುಕೊಂಡಿದೆ.
ಸ್ಮಿತ್ ಮೊಣಕೈ ಗಾಯದ ಕಾರಣ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಸೀಮಿತ ಓವರ್ಗಳ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಮೊದಲಾರ್ಧದ ಐಪಿಎಲ್ ಸಂದರ್ಭದಲ್ಲಿ ಸ್ಮಿತ್ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಸ್ಮಿತ್ ಡೆಲ್ಲಿಪರ 3ನೇ ಕ್ರಮಾಂಕದಲ್ಲಿ ಆಡಿದ್ದರು. ಇದೀಗ ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಂಡಿರುವುದರಿಂದ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದು ಕೂತೂಹಲಕರ ಸಂಗತಿಯಾಗಿದೆ.
ಏಕೆಂದರೆ ಡೆಲ್ಲಿ ತಂಡದಲ್ಲಿ ರಬಾಡ ಮತ್ತು ಎನ್ರಿಚ್ ನೋಕಿಯಾ ಇಬ್ಬರು ವೇಗಿಗಳು ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ. ಸ್ಟೋಯ್ನಿಸ್ ಆಲ್ರೌಂಡರ್ ಸ್ಥಾನದಲ್ಲಿ ಆಡಲಿದ್ದಾರೆ. ಇನ್ನು ಉಳಿದಿರುವ ಒಂದು ಸ್ಥಾನದಕ್ಕಾಗಿ ಸ್ಮಿತ್ ಮತ್ತು ವಿಂಡೀಸ್ ಸ್ಟಾರ್ ಶಿಮ್ರಾನ್ ಹೆಟ್ಮಾಯರ್ ನಡುವೆ ಪೈಪೋಟಿ ನಡೆಯಲಿದೆ.
ಗಾಯದಿದ ಚೇತರಿಸಿಕೊಂಡಿರುವ ಸ್ಮಿತ್ ಐಪಿಎಲ್ ಮೂಲಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ. ನಂತರ ಟಿ20 ವಿಶ್ವಕಪ್ ಮತ್ತು ಆ್ಯಶಷ್ ಸರಣಿಯಲ್ಲಿ ಬ್ಯುಸಿಯಾಗಲಿದ್ದಾರೆ.