ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಅರ್ಜುನ್ ತೆಂಡೂಲ್ಕರ್ ಗಾಯದ ಸಮಸ್ಯೆಯಿಂದ 2021ರ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಅವರ ಬದಲಿ ಆಟಗಾರನಾಗಿ ದೆಹಲಿ ವೇಗಿ ಸಿಮರ್ಜೀತ್ ಸಿಂಗ್ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಗಾಯಗೊಂಡಿರುವ ಅರ್ಜುನ್ ತೆಂಡೂಲ್ಕರ್ ಅವರ ಬದಲಿಗೆ ಸಿಮರ್ಜೀತ್ ಸಿಂಗ್ ಅವರನ್ನು 2021ರ ಐಪಿಎಲ್ಗಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್ ನಿಯಮಾವಳಿಗಳ ಪ್ರಕಾರ ಕಡ್ಡಾಯ ಕ್ವಾರಂಟೈನ್ ಮಾಡಿದ ನಂತರ ತಂಡದ ಜೊತೆಗೆ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಫ್ರಾಂಚೈಸಿ ಬುಧವಾರ ಪ್ರಕಟಣೆ ಹೊರಡಿಸಿದೆ.
ಸಿಮರ್ಜೀತ್ ಅವರಿಗೆ ಇದು ಮೊದಲ ಐಪಿಎಲ್ ಆಗಲಿದೆ. 23 ವರ್ಷದ ಬೌಲರ್ 2018ರ ಸೆಪ್ಟೆಂಬರ್ನಲ್ಲಿ ದೆಹಲಿ ತಂಡದ ಪರ ಲಿಸ್ಟ್ ಎ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಎರಡು ತಿಂಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್ಗೆ ಕಾಲಿಟ್ಟದ್ದರು. 2019ರಲ್ಲಿ ಟಿ20 ಕ್ರಿಕೆಟ್ಗೆ ಎಂಟ್ರಿ ಕೊಟ್ಟಿದ್ದರು. ಸಿಮರ್ಜೀತ್ ಸಿಂಗ್ ದೆಹಲಿ ಪರ 10 ಪ್ರಥಮ ದರ್ಜೆ, 19 ಲಿಸ್ಟ್ ಎ ಮತ್ತು 15 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 37, 19 ಮತ್ತು 18 ವಿಕೆಟ್ಗಳನ್ನು ಪಡೆದಿದ್ದಾರೆ.
ಸಿಂಗ್ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಆದರೆ ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಜೊತೆಗೆ ಸಂಪರ್ಕದಲ್ಲಿದ್ದ 8 ಮಂದಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಈ ವೇಳೆ ಸಿಮರ್ಜೀತ್ ಭಾರತದ 15ರ ಬಳಗಕ್ಕೆ ಸೇರಿಕೊಂಡಿದ್ದರು. ಆದರೆ ಒಂದೂ ಪಂದ್ಯದಲ್ಲೂ ಅವಕಾಶ ಪಡೆದಿರಲಿಲ್ಲ.
ಇದನ್ನೂ ಓದಿ: ಭಾರತದ ಸ್ಪಿನ್ನರ್ ಕುಲ್ದೀಪ್ ಯಾದವ್ ಮೊಣಕಾಲು ಸರ್ಜರಿ ಯಶಸ್ವಿ