ನವದೆಹಲಿ:2021ರ ಐಪಿಎಲ್ನಲ್ಲಿ ಅದ್ಭುತ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಎಡಗೈ ವೇಗಿ ಚೇತನ್ ಸಕಾರಿಯಾ ಅವರನ್ನು ರಾಜಸ್ಥಾನ್ ರಾಯಲ್ಸ್ ನಿರ್ದೇಶಕ ಕುಮಾರ್ ಸಂಗಕ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಒತ್ತಡ ನಿಭಾಯಿಸುವ ಆತನ ಕೌಶ್ಯಲ್ಯ ಮತ್ತು ಸಾಮರ್ಥ್ಯ ನನ್ನನ್ನು ಹೆಚ್ಚು ಆಕರ್ಷಿಸಿದೆ ಎಂದು ತಿಳಿಸಿದ್ದಾರೆ.
ಮೇ 4 ರಂದು 2021ರ ಐಪಿಎಲ್ ಕೋವಿಡ್ 19 ಕಾರಣದಿಂದ ರದ್ದಾಗಿದೆ. ಈ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ 7 ಪಂದ್ಯಗಳಲ್ಲಿ 6 ಅಂಕ ಸಂಪಾದಿಸಿ 5ನೇ ಸ್ಥಾನ ಪಡೆದುಕೊಂಡಿತ್ತು. ರಾಯಲ್ಸ್ ಪರ 7 ಪಂದ್ಯಗಳನ್ನಾಡಿದ್ದ ಚೇತನ್ ಸಕಾರಿಯಾ 7 ವಿಕೆಟ್ ಪಡೆದಿದ್ದರು. ಅಲ್ಲದೇ ಡೆತ್ ಬೌಲಿಂಗ್ನಲ್ಲಿ ಆತನ ಕೌಶಲ್ಯ ಕ್ರಿಕೆಟ್ ಪಂಡಿತರನ್ನು ಮತ್ತು ಅಭಿಮಾನಿಗಳನ್ನು ಆಕರ್ಷಿಸಿತ್ತು.
ಚೇತನ್ ಈ ಆವೃತ್ತಿಯಲ್ಲಿ ಬಹಿರಂಗಗೊಂಡ ಒಂದು ಅದ್ಭುತ ಪ್ರತಿಭೆ. ಆತನ ವರ್ತನೆ, ಒತ್ತಡವನ್ನು ನಿಭಾಯಿಸುವ ಅವನ ಸಾಮರ್ಥ್ಯ ಮತ್ತು ಆತನ ಕೌಶಲ್ಯಗಳು ನನ್ನನ್ನು ಹೆಚ್ಚು ಆಕರ್ಷಿಸಿತು. ನಾವು ಅನುಜ್(ರಾವತ್) ಮತ್ತು ಯಶ್(ಜೈಸ್ವಾಲ್) ಅವರಂತಹ ಯುವ ಆಟಗಾರರನ್ನು ಹೊಂದಿದ್ದೇವೆ. ಇವರು ಫ್ರಾಂಚೈಸಿಯಲ್ಲಿ ತುಂಬಾ ದೀರ್ಘ ಸಮಯದವರೆಗೆ ಇರಲಿದ್ದಾರೆ. ಈ ಮೂವರು ನನ್ನನ್ನೂ ಟೂರ್ನಿ ಉದ್ದಕ್ಕೂ ಹೆಚ್ಚು ಆಕರ್ಷಿಸಿದರು ಎಂದು ಸಂಗಕ್ಕಾರ ರಾಯಲ್ಸ್ ಆಯೋಜಿಸಿದ್ದ ಸಂವಾದದಲ್ಲಿ ತಿಳಿಸಿದ್ದಾರೆ.
ಈ ಮೂವರು ನಿಜವಾಗಿಯೂ ಮೈದಾನದಲ್ಲಿ ಉತ್ತಮ ಅವಕಾಶ ಪಡೆದಿದ್ದಾರೆ. ದುರದೃಷ್ಟವಶಾತ್, ಅನೂಜ್ ಒಂದು ಪಂದ್ಯದಲ್ಲಿ ಅವಕಾಶ ಪಡೆದರಾದರೂ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆದರೆ, ಅವರು ಫೀಲ್ಡಿಂಗ್ನಲ್ಲಿ ಅತ್ಯುತ್ತಮವಾದ ಶಕ್ತಿಯನ್ನು ತೋರಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ರಿಷಭ್ ಪಂತ್ ಭವಿಷ್ಯದಲ್ಲಿ ಭಾರತದ ನಾಯಕನಾಗಲಿದ್ದಾರೆ: ಸುನೀಲ್ ಗವಾಸ್ಕರ್