ಮುಂಬೈ: ಬ್ಯಾಟಿಂಗ್ ಸ್ವರ್ಗವಾಗಿರುವ ವಾಂಖೆಡೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸಾಮ್ಸನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಕೂದೆಲೆಳೆಯಂತರದಿಂದ ಸೋಲು ಕಂಡಿದ್ದ ರಾಯಲ್ಸ್ ಇಂದಿನ ಪಂದ್ಯದಲ್ಲಿ ಗೆದ್ದು ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿದೆ. ಆದರೆ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ಗಾಯದಿಂದ ಟೂರ್ನಿಯಿಂದ ಹೊರ ಬಿದ್ದಿರುವುದರಿಂದ ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಆಟಗಾರ ಮಿಲ್ಲರ್ ಆಡುವ 11ರ ಬಳಗ ಸೇರಿಕೊಂಡಿದ್ದಾರೆ.
ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಜೋಸ್ ಬಟ್ಲರ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನು ಫ್ಲಾಟ್ ವಿಕೆಟ್ ಆಗಿರುವುದರಿಂದ ಸ್ಪಿನ್ನರ್ ಶ್ರೇಯಸ್ ಗೋಪಾಲ್ರನ್ನು ಹೊರಗಿಟ್ಟು ವೇಗಿ ಜಯದೇವ್ ಉನಾದ್ಕಟ್ಗೆ ಅವಕಾಶ ನೀಡಲಾಗಿದೆ.
ಇತ್ತ ಸಿಎಸ್ಕೆ ವಿರುದ್ಧ ಗೆಲುವು ಸಾಧಿಸಿದ ವಿಶ್ವಾಸದಲ್ಲಿರುವ ಡೆಲ್ಲಿ ತಂಡ ಕೂಡ 2 ಬದಲಾವಣೆ ಮಾಡಿಕೊಂಡಿದೆ. ಕ್ವಾರಂಟೈನ್ ಮುಗಿಸಿರುವ ಕಗಿಸೋ ರಬಾಡ, ಹೆಟ್ಮೆಯರ್ ಬದಲಿಗೆ ತಂಡಕ್ಕೆ ಸೇರಿಕೊಂಡರೆ, ಅಮಿತ್ ಮಿಶ್ರಾ ಅವರನ್ನು ಹೊರಗಿಟ್ಟು ಆಲ್ರೌಂಡರ್ ಲಲಿತ್ ಯಾದವ್ಗೆ ಅವಕಾಶ ನೀಡಲಾಗಿದೆ.