ಮುಂಬೈ:ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿರುವ ಪಂಜಾಬ್ 8ವಿಕೆಟ್ ನಷ್ಟಕ್ಕೆ ಕೇವಲ 106 ರನ್ಗಳಿಕೆ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದ ಪಂಜಾಬ್ ಆರಂಭದಿಂದಲೂ ವಿಕೆಟ್ ಕಳೆದುಕೊಂಡಿದ್ದರಿಂದ ಬೃಹತ್ ರನ್ ಪೇರಿಸಲು ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗರಾದ ಮಯಾಂಕ್ ಹಾಗೂ ಕ್ಯಾಪ್ಟನ್ ರಾಹುಲ್ ನಿರಾಸೆ ಮೂಡಿಸಿದರು. ಚೆನ್ನೈ ಪರ ಮೊದಲ ಓವರ್ ಎಸೆದ ದೀಪಕ್ ಚಹರ್ ಓವರ್ನಲ್ಲೇ ಮಯಾಂಕ್(0) ವಿಕೆಟ್ ಒಪ್ಪಿಸಿದರೆ, ರಾಹುಲ್(5)ರನ್ಗಳಿಕೆ ಮಾಡಿದ್ದ ವೇಳೆ ರನೌಟ್ ಬಲೆಗೆ ಬಿದ್ದರು.
ಇದಾದ ಬಳಿಕ ಬಂದ ಕ್ರಿಸ್ ಗೇಲ್(10), ದೀಪಕ್ ಹೂಡಾ(10), ಪೂರನ್ (0) ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದರಿಂದ ತಂಡ 4.4 ಓವರ್ಗಳಲ್ಲಿ ಕೇವಲ 26 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.
ಈ ವೇಳೆ ಒಂದಾದ ಶಾರೂಕ್ ಖಾನ್ - ರಿಚರ್ಡ್ಸನ್ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ 15 ರನ್ಗಳಿಕೆ ಮಾಡಿದ್ದ ವೇಳೆ ಮೊಯಿನ್ ಅಲಿ ಬೌಲಿಂಗ್ನಲ್ಲಿ ರಿಚರ್ಡ್ಸನ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಶಾರೂಕ್ ಖಾನ್(47) ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮುರ್ಗನ್ ಅಶ್ವಿನ್(6), ಶಮಿ ಅಜೇಯ(9)ರನ್ಗಳಿಕೆ ಮಾಡಿದ್ದರಿಂದ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 106 ರನ್ಗಳಿಕೆ ಮಾಡಿದ್ದು, ಚೆನ್ನೈಗೆ 107ರನ್ಗಳ ಸುಲಭ ಗುರಿ ನೀಡಿದೆ. ತಂಡದ ಪರ ಶಾರೂಕ್ ಖಾನ್ 36 ಎಸೆತಗಳಲ್ಲಿ 47ರನ್ಗಳಿಕೆ ಮಾಡಿರುವುದು ಅತ್ಯಧಿಕ ಸ್ಕೋರ್ ಆಗಿದೆ.
ಚೆನ್ನೈ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ದೀಪಕ್ ಚಹರ್ 4 ಓವರ್ಗಳಲ್ಲಿ 13 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದುಕೊಂಡರೆ, ಸ್ಯಾಮ್ ಕರ್ರನ್, ಮೊಯಿನ್ ಅಲಿ, ಡ್ವೇನ್ ಬ್ರಾವೋ ತಲಾ 1ವಿಕೆಟ್ ಕಬಳಿಸಿ ತಂಡಕ್ಕೆ ಮೆಲುಗೈ ತಂದುಕೊಟ್ಟರು.