ಶಾರ್ಜಾ: ಪ್ಲೇ ಆಫ್ ಪ್ರವೇಶಿಸಲು ನಿರ್ಣಾಯಕವಾಗಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಚೇಸಿಂಗ್ ಮಾಡಲು ನಿರ್ಧರಿಸಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಆಡಿರುವ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲುಗಳೊಂದಿಗೆ 10 ಅಂಕ ಪಡೆದುಕೊಂಡಿವೆ. ಈ ಪಂದ್ಯವನ್ನು ಗೆದ್ದ ತಂಡ 5ನೇ ಸ್ಥಾನಕ್ಕೇರಲಿದೆ.
5 ಬಾರಿ ಚಾಂಪಿಯನ್ ಮುಂಬೈ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ಇದೇ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಡಿಮೆ ಮೊತ್ತದ ಟಾರ್ಗೆಟ್ ನೀಡಿಯೂ ಪ್ರಬಲ ಪೈಪೋಟಿ ನೀಡಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಬದಲಿಗೆ ಇಶಾನ್ ಕಿಶನ್ ಮತ್ತು ಕೃನಾಲ್ ಪಾಂಡ್ಯ ಬದಲಿಗೆ ಜಿಮ್ಮಿ ನೀಶಮ್ಗೆ ತಂಡದಲ್ಲಿ ಅವಕಾಶ ನೀಡಿದೆ.
ತನ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ಈ ಪಂದ್ಯದಲ್ಲಿ 2 ಬದಲಾವಣೆ ಮಾಡಿಕೊಂಡಿದೆ. ಮಯಾಂಕ್ ಮರ್ಕಂಡೆ ಬದಲಿಗೆ ಕನ್ನಡಿಗ ಶ್ರೇಯಸ್ ಗೋಪಾಲ್ ಮತ್ತು ಆಕಾಶ್ ಸಿಂಗ್ ಬದಲಿಗೆ ಕುಲ್ದೀಪ್ ಯಾದವ್ಗೆ ಅವಕಾಶ ನೀಡಿದೆ.