ಲಂಡನ್: ತಾವೂ ಕೂತೂಹಲಕಾರಿಯಾಗಿ ಎದುರುನೋಡುತ್ತಿದ್ದ 2021ರ ಐಪಿಎಲ್ ಹರಾಜಿನಲ್ಲಿ ತಮ್ಮನ್ನು ಕಡೆಣಗಣಿಸಿದ್ದು ದೇವರ ಆಶೀರ್ವಾದ ಎಂದೇ ಭಾವಿಸುತ್ತೇನೆ. ಭಾರತದಲ್ಲಿ ಕೋವಿಡ್ 19 ಹೆಚ್ಚಾಗುತ್ತಿರುವ ಪರಿಸ್ಥಿತಿಯಲ್ಲಿ ಅಲ್ಲಿ ಆಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ ಎಂದು ಆಸ್ಟ್ರೇಲಿಯಾದ ಉದಯೋನ್ಮುಖ ಟೆಸ್ಟ್ ಬ್ಯಾಟ್ಸ್ಮನ್ ಮಾರ್ನಸ್ ಲಾಬುಶೇನ್ ಹೇಳಿದ್ದಾರೆ.
ಫೆಬ್ರವರಿಯಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ 26 ವರ್ಷದ ಆಸೀಸ್ ಬ್ಯಾಟ್ಸ್ಮನ್ ನನ್ನು ಯಾವ ಫ್ರಾಂಚೈಸಿಯೂ ಖರೀದಿಸಲು ಬಯಸಲಿಲ್ಲ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದಲ್ಲಿ ಲೀಗ್ ಆಡುತ್ತಿರುವ ತಮ್ಮ ತಂಡದ ಸಹ ಆಟಗಾರರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
" ನನಗೆ ಐಪಿಎಲ್ನಲ್ಲಿ ಅವಕಾಶ ಸಿಗದಿರುವುದು ಖಂಡಿತವಾಗಿಯೂ ದೇವರ ಆಶೀರ್ವಾದವಾಗಿದೆ" ಎಂದು ಲಾಬುಶೇನ್ ಲಂಡನ್ನಲ್ಲಿ ಸಂದರ್ಶನದ ವೇಳೆ ಹೇಳಿದ್ದಾರೆ.
ನಾನು ಐಪಿಎಲ್ನಲ್ಲಿ ಆಡುವುದಕ್ಕೆ ತುಂಬಾ ಇಷ್ಟಪಡುತ್ತೇನೆ, ಅದೊಂದು ಅದ್ಭುತವಾದ ಟೂರ್ನಮೆಂಟ್. ಆದರೆ, ಯಾವಾಗಲೂ ಒಂದು ನಾಣ್ಯದಲ್ಲಿ 2 ಮುಖಗಳಿರುತ್ತವೆ. ಕೆಲವೊಮ್ಮೆ ಅವಕಾಶಗಳು ಆಗಾಗ್ಗೆ ಬರುವುದಿಲ್ಲ. ಇನ್ನು ಭಾರತದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ, ಹಾಗಾಗಿ ನನಗೆ ಅವಕಾಶ ಸಿಗದಿರುವುದೇ ಒಳ್ಳೆಯದಾಗಿದೆ ಎಂದು ಲಂಡನ್ನಲ್ಲಿ ಗ್ಲಾಮೊರ್ಗನ್ ತಂಡದ ಪರ ಕೌಂಟಿ ಕ್ರಿಕೆಟ್ಗಾಗಿ ತೆರಳಿರುವ ಲಾಬುಶೇನ್ ಹೇಳಿದ್ದಾರೆ.
ಭಾರತದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರುತ್ತಿವೆ. 2000ಕ್ಕೂ ಹೆಚ್ಚು ಮಂದಿ ಸಾಂಕ್ರಾಮಿಕಕ್ಕೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಟೈ, ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಐಪಿಎಲ್ ತೊರೆದು ಈಗಾಗಲೆ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ.
ಇದನ್ನು ಓದಿ:WD, 4,4,4,4,4,4: ಒಂದೇ ಓವರ್ನಲ್ಲಿ 6 ಫೋರ್ ಬಾರಿಸಿ ದಾಖಲೆ ಬರೆದ ಪೃಥ್ವಿ ಶಾ