ಶಾರ್ಜಾ:ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಸೋಲಿನೊಂದಿಗೆ 2021ರ ಐಪಿಎಲ್ನಿಂದ ಆರ್ಸಿಬಿ ಹೊರಬಿದ್ದಿದ್ದು, ಕಪ್ ಗೆಲ್ಲುವ ಕನಸು ಮತ್ತೆ ಭಗ್ನಗೊಂಡಂತಾಗಿದೆ.
14ನೇ ಐಪಿಎಲ್ನ ಎರಡನೇ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಸುನಿಲ್ ನರೈನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 138 ರನ್ಗಳಿಸಿತ್ತು. ಈ ಗುರಿಯನ್ನು ಕೋಲ್ಕತ್ತಾ 6 ವಿಕೆಟ್ ನಷ್ಟಕ್ಕೆ 19.4ನೇ ಓವರ್ನಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ.
139 ರನ್ ಗುರಿ ಪಡೆದ ಕೋಲ್ಕತ್ತಾಗೆ ಮೊದಲ ವಿಕೆಟ್ಗೆ ಶುಬ್ಮನ್ ಗಿಲ್ (29) ಹಾಗೂ ವೆಂಕಟೇಶ್ ಅಯ್ಯರ್(26) 41 ರನ್ಗಳ ಉತ್ತಮ ಆರಂಭ ನೀಡಿದರು. 29 ರನ್ ಗಳಿಸಿದ್ದ ಗಿಲ್ ವಿಕೆಟ್ ಪತನದ ಬಳಿಕ ಬಂದ ರಾಹುಲ್ ತ್ರಿಪಾಠಿ (6) ಕೆಲ ಹೊತ್ತಲ್ಲೇ ಪೆವಿಲಿಯನ್ಗೆ ಮರಳಿದರು. ನಂತರ ಐಯ್ಯರ್ ಕೂಡ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಆಗ ಕೋಲ್ಕತ್ತಾ ಮೊತ್ತ 3 ವಿಕೆಟ್ಗೆ 79 ರನ್ ಆಗಿತ್ತು.
ಆರ್ಸಿಬಿಗೆ ಮುಳುವಾದ ನರೈನ್:
ಐಯ್ಯರ್ ಬಳಿಕ ಕ್ರೀಸ್ಗೆ ಬಂದ ನರೈನ್, ಡೇನಿಯಲ್ ಕ್ರಿಶ್ಚಿಯನ್ ಎಸೆದ ಪಂದ್ಯದ 11ನೇ ಓವರ್ನಲ್ಲಿ 3 ಸಿಕ್ಸರ್ ಬಾರಿಸಿ ಕೋಲ್ಕತ್ತಾ ಗೆಲುವನ್ನು ಸುಲಭಗೊಳಿಸಿದರು. ನರೈನ್ 15 ಎಸೆತಗಳಲ್ಲಿ 26 ರನ್ ಬಾರಿಸಿ ಔಟ್ ಆದರು. ಇದಕ್ಕೂ ಮುನ್ನ ನರೈನ್ಗೆ ಉತ್ತಮ ಸಾಥ್ ನೀಡಿದ ನಿತೀಶ್ ರಾಣಾ 23 ರನ್ ಪೇರಿಸಿ ಚಹಲ್ ಬೌಲಿಂಗ್ನಲ್ಲಿ ವಿಲ್ಲಿಯರ್ಸ್ಗೆ ಕ್ಯಾಚ್ ನೀಡಿ ಹೊರನಡೆದರು.
ಬಳಿಕ ಒಂದು ಬೌಂಡರಿ ಸಹಿತ 10 ರನ್ ಬಾರಿಸಿದ್ದ ಕಾರ್ತಿಕ್ರನ್ನು ಸಿರಾಜ್ ಔಟ್ ಮಾಡಿದರಾದರೂ ಅದಾಗಲೇ ಕೋಲ್ಕತ್ತಾ ಗೆಲುವಿನ ಸಹಿಹ ಬಂದಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ಮೋರ್ಗನ್ 5 ಹಾಗೂ ಅಂತಿಮ ಓವರ್ನಲ್ಲಿ ಬೌಂಡರಿ ಬಾರಿಸಿದ ಶಕಿಬ್ ಉಲ್ ಹಸನ್ 9 ರನ್ ಬಾರಿಸಿ ಅಜೇಯರಾಗುಳಿದರು. 19.4ನೇ ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು ಕೆಕೆಆರ್ ಗೆಲುವಿನ ದಡ ಸೇರಿತು.