ದುಬೈ: 2021ರಲ್ಲಿ ಆರಂಭದಿಂದಲೂ ಅಗ್ರ 2 ಸ್ಥಾನ ಕಾಪಾಡಿಕೊಂಡು ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಮವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.
ಎರಡು ತಂಡಗಳು ಆಡಿರುವ 12 ಪಂದ್ಯಗಳಲ್ಲಿ 9 ಜಯ ಮತ್ತು 3 ಸೋಲು ಕಂಡು 18 ಅಂಕ ಪಡೆದುಕೊಂಡಿವೆ. ಆದರೆ, ರನ್ರೇಟ್ ಆಧಾರದ ಮೇಲೆ ಸಿಎಸ್ಕೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಪಂದ್ಯವನ್ನು ಗೆಲ್ಲುವ ತಂಡ ಅಗ್ರಸ್ಥಾನಕ್ಕೇರಲಿದ್ದು, ಫೈನಲ್ ಪ್ರವೇಶಿಸಿಲು ಎರಡು ಅವಕಾಶವನ್ನು ಪಡೆಯಲಿದೆ.
ಎರಡೂ ತಂಡಗಳು ಈ ವರ್ಷದ ಆವೃತ್ತಿಯಲ್ಲಿ ಮೊದಲು ಮುಖಾಮುಖಿಯಾಗಿದ್ದಾಗ ಡೆಲ್ಲಿ ತಂಡ ಜಯಬೇರಿ ಬಾರಿಸಿತ್ತು. 189ರನ್ಗಳ ಬೃಹತ್ ಗುರಿಯನ್ನು ಡೆಲ್ಲಿ ಸುಲಭವಾಗಿ ಚೇಸ್ ಮಾಡಿ ಜಯ ಸಾಧಿಸಿತ್ತು. ಇನ್ನು ಕಳೆದ ಪಂದ್ಯದಲ್ಲಿ ಸತತ 5 ಬಾರಿ ತಮ್ಮ ವಿರುದ್ಧ ಪ್ರಾಬಲ್ಯ ಸಾಧಿಸಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದ ಆತ್ಮವಿಶ್ವಾಸದಲ್ಲಿ ಡೆಲ್ಲಿಯಿದೆ. ತಂಡದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಸಮತೋಲನದಿಂದ ಇದ್ದು, ಸಿಎಸ್ಕೆಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
ಇತ್ತ ಕಳೆದ ಯುಎಇಯಲ್ಲಿ ಸತತ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ 190 ರನ್ಗಳ ಗುರಿ ನೀಡಿಯೂ ಸೋಲು ಕಂಡಿದೆ. ಹಾಗಾಗಿ ಡೆಲ್ಲಿ ವಿರುದ್ಧ ಮತ್ತೆ ಗೆಲುವಿನ ಹಳಿಗೆ ಮರಳಿ ತನ್ನ ಅಗ್ರಸ್ಥಾನ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ.