ಅಹ್ಮದಾಬಾದ್:ಆಪತ್ಪಾಂಧವ ಎಬಿ ಡಿ ವಿಲಿಯರ್ಸ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 172 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ನಾಯಕ ಕೊಹ್ಲಿ ಮತ್ತು ಪಡಿಕ್ಕಲ್ ಇಬ್ಬರನ್ನು ಸತತ 2 ಎಸೆತಗಳಲ್ಲಿ ಕಳೆದುಕೊಂಡು ಆಘಾತ ಅನುಭಿವಿಸಿತು. ಕೊಹ್ಲಿ 12 ರನ್ಗಳಿಸಿ ಆವೇಶ್ ಖಾನ್ಗೆ ವಿಕೆಟ್ ಒಪ್ಪಿಸಿದರೆ, ಪಡಿಕ್ಕಲ್ 17 ರನ್ಗಳಿಸಿ ಇಶಾಂತ್ ಶರ್ಮಾಗೆ ಬೌಲ್ಡ್ ಆದರು.
ನಂತರ ಜೊತೆಗೂಡಿದ ರಜಪ್ ಪಾಟಿದಾರ್ ಮತ್ತು ಮ್ಯಾಕ್ಸ್ವೆಲ್ 30 ರನ್ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರು ಮಾಡಿದರು. 20 ಎಸೆತಗಳಲ್ಲಿ 25 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಮ್ಯಾಕ್ಸ್ವೆಲ್ ಮಿಶ್ರಾ ಬೌಲಿಂಗ್ನಲ್ಲಿ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಎಬಿಡಿ ಜೊತೆಗೂಡಿದ ಪಾಟಿದಾರ್ ವಿಕೆಟ್ ಉಳಿಸಿಕೊಂಡು ವೇಗವಾಗಿ ರನ್ಗಳಿಸಿದರು. ಪಾಟಿದಾರ್ ಔಟಾಗುವ ಮುನ್ನ 22 ಎಸೆತಗಳಲ್ಲಿ 2 ಸಿಕ್ಸರ್ಗಳ ಸಹಿತ 31 ರನ್ಗಳಿಸಿ 54 ರನ್ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ನಂತರ ಬಂದ ಸುಂದರ್ ಕೇವಲ 6 ರನ್ಗಳಿಸಿ ಔಟಾದರು.
ಎಬಿಡಿ ಅಬ್ಬರ:
9ನೇ ಓವರ್ನಲ್ಲಿ ಬ್ಯಾಟಿಂಗ್ ಆಗಮಿಸಿದರೂ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ವಿಲಿಯರ್ಸ್ ಕೊನೆಯ ಕೆಟ್ಟ ಎಸೆತಗಳನ್ನು ದಂಡಿಸುತ್ತಾ 35ನೇ ಅರ್ಧಶತಕ ಪೂರೈಸಿದರು. ಕೊನೆಯ ಓವರ್ನಲ್ಲಿ ಅಬ್ಬರಿಸಿದ ಮಿಸ್ಟರ್ 360 ಭರ್ಜರಿ 3 ಸಿಕ್ಸರ್ಗಳ ಸಹಿತ 23 ರನ್ ಸೂರೆಗೈದರು. ಒಟ್ಟಾರೆ 42 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 75 ರನ್ಗಳಿಸಿ 171 ರನ್ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು.
ಡೆಲ್ಲಿ ಪರ ಇಶಾಂತ್ ಶರ್ಮಾ 26ಕ್ಕೆ 1, ರಬಾಡ 38ಕ್ಕೆ 1, ಆವೇಶ್ ಖಾನ್ 24ಕ್ಕೆ1, ಅಮಿತ್ ಮಿಶ್ರಾ 27ಕ್ಕೆ 1, ಅಕ್ಷರ್ ಪಟೇಲ್ 33ಕ್ಕೆ 1 ವಿಕೆಟ್ ಪಡೆದರು.