ದುಬೈ :ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳು ಆರಂಭಗೊಳ್ಳಲಿವೆ. ಈಗಾಗಲೇ ಎಲ್ಲ ಪ್ರಾಂಚೈಸಿಗಳು ಅರಬ್ ನಾಡಿನಲ್ಲಿ ಬೀಡು ಬಿಟ್ಟಿವೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಈಗಾಗಲೇ ಅಭ್ಯಾಸ ಆರಂಭಿಸಿದೆ. ಸ್ಫೋಟಕ ಬ್ಯಾಟ್ಸಮನ್ ಎಬಿಡಿ ವಿಲಿಯರ್ಸ್ ಇಂದು ತಂಡ ಸೇರಿಕೊಂಡಿದ್ದಾರೆ.
ಸೆಪ್ಟೆಂಬರ್ 20ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಟ ನಡೆಸಲಿದೆ. ಟೂರ್ನಿ ಆರಂಭಗೊಳ್ಳಲು ಕೆಲ ದಿನ ಮಾತ್ರ ಬಾಕಿ ಉಳಿದಿರುವ ಕಾರಣ ಎಲ್ಲ ತಂಡದ ಆಟಗಾರರು ಈಗಾಗಲೇ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಎಬಿಡಿ ಕೂಡ ಆರ್ಸಿಬಿ ಸೇರಿಕೊಂಡಿರುವ ಕಾರಣ ತಂಡಕ್ಕೆ ಆನೆಬಲ ಬಂದಂತಾಗಿದೆ.
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ದುಬೈನಲ್ಲಿ ಆರ್ಸಿಬಿ ತಂಡ ಸೇರಿರುವ ಬಗ್ಗೆ ಪ್ರಾಂಚೈಸಿ ಇನ್ಸ್ಟ್ರಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದೆ. ಚಂಡಮಾರುತ(storm) ತಂಡ ಸೇರಿಕೊಂಡಿದೆ ಎಂದು ಬರೆದುಕೊಂಡಿದೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಆರ್ಸಿಬಿ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿದ್ದು 10 ಪಾಯಿಂಟ್ಗಳಿಂದ 3ನೇ ಸ್ಥಾನದಲ್ಲಿದೆ.
ಇದನ್ನೂ ಓದಿರಿ: ಕಪಿಲ್‌ದೇವ್ ದಾಖಲೆ ಪುಡಿಗಟ್ಟಿದ ಬುಮ್ರಾ: ಅತಿ ವೇಗವಾಗಿ 100 ವಿಕೆಟ್ ಸಾಧನೆಗೈದ ವೇಗಿ
ದ್ವಿತೀಯ ಹಂತದ ಐಪಿಎಲ್ಗಾಗಿ ಆಗಸ್ಟ್ 29ರಂದೇ ದೇವದತ್ ಪಡಿಕ್ಕಲ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಯುಜ್ವೇಂದ್ರ ಚಹಲ್ ಸೇರಿದಂತೆ ಆರ್ಸಿಬಿ ಬಳಗ ಬೆಂಗಳೂರಿನಿಂದ ದುಬೈಗೆ ಪ್ರಯಾಣ ಬೆಳೆಸಿತ್ತು. ಆರು ದಿನಗಳ ಕಾಲ ಕ್ವಾರಂಟೈನ್ ಮುಗಿಸಿರುವ ತಂಡ ಸದ್ಯ ಅಭ್ಯಾಸದಲ್ಲಿ ಭಾಗಿಯಾಗಿದೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಸದ್ಯ ಲಂಡನ್ನಲ್ಲಿದ್ದಾರೆ.