ಶಾರ್ಜಾ:ರಾಜಸ್ಥಾನ್ ರಾಯಲ್ಸ್ ವಿರುದ್ಧ 217 ರನ್‌ಗಳನ್ನು ಚೇಸ್ ಮಾಡುವಾಗ ಚೆನ್ನೈ ಪರ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಧೋನಿ ನಿರ್ಧಾರಕ್ಕೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಗರಂ ಆಗಿದ್ದಾರೆ.
ಚೆನ್ನೈ ತಂಡ 14 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿರುವಾಗ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಆಗಮಿಸಿದ್ರು. ಆ ಸಮಯದಲ್ಲಿ ಗೆಲುವಿಗೆ ಇನ್ನೂ 103 ರನ್ಗಳು ಬೇಕಾಗಿದ್ದವು. ಆದರೆ, ಧೋನಿ ಮೊದಲೇ ಬರಬೇಕಿತ್ತು ಎಂದು ಅನೇಕ ಪಂಡಿತರು ಮತ್ತು ತಜ್ಞರು ಹೇಳಿದ್ದಾರೆ. ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್ ಧೋನಿ ಅವರಿಗಿಂತ ಮೊದಲು ಬ್ಯಾಟಿಂಗ್ಗೆ ಬಂದಿದ್ದರು.
ನನಗೆ ಸ್ವಲ್ಪ ಆಶ್ಚರ್ಯವಾಯಿತು. ಪ್ರಾಮಾಣಿಕವಾಗಿ ಎಂ.ಎಸ್. ಧೋನಿ 7 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆಯೇ? ಗಾಯಕ್ವಾಡ್, ಸ್ಯಾಮ್ ಕರ್ರನ್ ಅವರನ್ನು ತಮಗಿಂತ ಮೊದಲೇ ಬ್ಯಾಟಿಂಗ್ಗೆ ಕಳುಹಿಸಿದ್ದು ನನಗೆ ಅರ್ಥವಾಗಲಿಲ್ಲ. 217 ರನ್ ಚೇಸ್ ಮಾಡುವಾಗ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೀರಾ? ಎಂದು ಗಂಭೀರ್ ಕ್ರೀಡಾ ವೆಬ್ಸೈಟ್ನಲ್ಲಿ ಪ್ರಶ್ನಿಸಿದ್ದಾರೆ.
ಎಂ ಎಸ್ ಧೋನಿ ಮೂರು ಸಿಕ್ಸರ್ ಹೊಡೆದಾಗ ಎಲ್ಲರೂ ಕೊನೆಯ ಓವರ್ ಬಗ್ಗೆ ಮಾತನಾಡಬಹುದು. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಇದು ಕೇವಲ ವೈಯಕ್ತಿಕ ರನ್ಗಳಾಗಿತ್ತು. ಬೇರೊಬ್ಬ ಆಟಗಾರ ಅಥವಾ ಇನ್ನೊಬ್ಬ ಕ್ಯಾಪ್ಟನ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ರೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಿತ್ತು. ಬಹುಶಃ ಧೋನಿ ಎನ್ನುವ ಕಾರಣಕ್ಕೆ ಅನೇಕರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದಿದ್ದಾರೆ ಗಂಭೀರ್.
ನೀವು ಬೇಗನೇ ಔಟ್ ಆಗಿ ಹೊರಬಂದಿದ್ದರೆ ಯಾವುದೇ ತಪ್ಪಿಲ್ಲ, ಕನಿಷ್ಠ ನೀವೇ ಮುಂದೆ ನಿಂತು ತಂಡವನ್ನು ಮುನ್ನಡೆಸಲು ಪ್ರಾರಂಭಿಸಿ, ತಂಡವನ್ನು ಪ್ರೇರೇಪಿಸಲು ಪ್ರಯತ್ನಿಸುತ್ತೀರಿ. ಕೊನೆಯ ಓವರ್‌ನಲ್ಲಿ ನೀವು ಏನು ಮಾಡಿದ್ದೀರಿ, ಬಹುಶಃ ಅದನ್ನೇ 4ನೇ ಸ್ಥಾನ ಅಥವಾ 5ನೇ ಸ್ಥಾನದಲ್ಲಿ ಡು ಪ್ಲೆಸಿಸ್ ಜೊತೆ ಆಡಿದ್ದರೆ ಉತ್ತಮ ಫಲಿತಾಂಶ ದೊರಕುತಿತ್ತು ಎಂದಿದ್ದಾರೆ.