ದುಬೈ: ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್ ನಡೆಸಿದ ಹೈದರಾಬಾದ್ ತಂಡದ ರಶೀದ್ ಖಾನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ನಾಲ್ಕು ಓವರ್ ಬೌಲಿಂಗ್ ನಡೆಸಿದ ಖಾನ್, ಕೇವಲ 7 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. 24 ಎಸೆತಗಳ ಪೈಕಿ 17 ಡಾಟ್ ಬಾಲ್ ಎಸೆದು ಡೆಲ್ಲಿ ಬ್ಯಾಟ್ಸ್ಮನ್ಗಳನ್ನು ಪರದಾಡುವಂತೆ ಮಾಡಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, 'ನಾನು ವಿಕೆಟ್ ಪಡೆಯುತ್ತೇನೋ ಇಲ್ಲವೋ. ಆದರೆ, ರನ್ ನಿಯಂತ್ರಣದತ್ತ ಹೆಚ್ಚು ಗಮನಹರಿಸುತ್ತೇನೆ. ಡಾಟ್ ಬಾಲ್ಗಳು ವಿಕೆಟ್ ಪಡೆಯಲು ನನಗೆ ಸಹಾಯ ಮಾಡುತ್ತವೆ. ಇನ್ನೊಬ್ಬರಿಗೂ ವಿಕೆಟ್ ಪಡೆಯಲು ಡಾಟ್ಬಾಲ್ಗಳು ಸಹಾಯ ಮಾಡುತ್ತವೆ" ಎಂದು ಹೇಳಿದ್ದಾರೆ.
"ನಾನು ಸ್ಪಷ್ಟ ಮನಸ್ಸಿನಿಂದ ಬೌಲಿಂಗ್ ಮಾಡಲು ಹೋಗುತ್ತೇನೆ. ಗುರಿ ಏನು, ನಾವು ಮೊದಲು ಬೌಲ್ ಮಾಡಿದರೆ ಉತ್ತಮ ಸ್ಕೋರ್ ಯಾವುದು ಎಂದು ಸ್ಕೋರ್‌ಬೋರ್ಡ್ ಬಗ್ಗೆ ಯೋಚಿಸುವುದಿಲ್ಲ. ಸರಿಯಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡಬೇಕೆಂದು ಭಾವಿಸುತ್ತೇನೆ. ನೀವು ಬ್ಯಾಟ್ಸ್‌ಮನ್‌ನ ಮನಸ್ಸಿನೊಂದಿಗೆ ಆಟವಾಡಬೇಕು. ಬ್ಯಾಟ್ಸ್‌ಮನ್ ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನೋಡಿ ಬೌಲಿಂಗ್ ಮಾಡಬೇಕು" ಎಂದು ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿ 220 ರನ್ಗಳ ಗುರಿ ನೀಡಿತು. ಬೃಹತ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ಗಳಲ್ಲಿ 131 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 88 ರನ್ಗಳ ಅಂತರದ ಸೋಲು ಕಂಡಿದೆ.