ದುಬೈ:ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಪಂದ್ಯದ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತುದಾರ ಸ್ಟೀಫನ್ ಫ್ಲೆಮಿಂಗ್, ನಾವು ಕೆಲವು ಪ್ರಮುಖ ಆಟಗಾರರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಬ್ಯಾಟಿಂಗ್ ಲೈನ್ನ ಅಂಬಾಟಿ ರಾಯುಡು ಮತ್ತು ಸುರೇಶ್ ರೈನಾ ಇಲ್ಲದಿರುವುದ ದೊಡ್ಡನಷ್ಟವಾಗಿದೆ. ಆಟಗಾರರನ್ನು ಹೇಗೆ ಬಳಸುವುದು ಎಂಬುದರ ಕುರಿತು ನಾವು ಇನ್ನಷ್ಟು ಪ್ರಯತ್ನ ನಡೆಸಬೇಕಿದೆ. ಸಿಎಸ್ಕೆ ತನ್ನ ರನ್ ಚೇಸ್ ಮಾಡುವಲ್ಲಿ ಎಲ್ಲೋ ಒಂದು ಕಡೆ ತಪ್ಪು ಮಾಡಿದೆ ಎಂದರು.
ಅನುಭವಿಗಳ ತಂಡ ಎನಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಎಲ್ಲಾ ವಿಭಾಗಗಳಲ್ಲೂ ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ 44 ರನ್‌ಗಳ ಅಂತರದ ಗೆಲುವನ್ನು ಸಾಧಿಸಿದೆ.
ಗೆಲಲು 176 ರನ್‌ಗಳ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪವರ್‌ಪ್ಲೇ ಒಳಗೆ ತನ್ನ ಆರಂಭಿಕ ಆಟಗಾರರಾದ ಶೇನ್ ವ್ಯಾಟ್ಸನ್ ಮತ್ತು ಮುರಳಿ ವಿಜಯ್ ಇಬ್ಬರನ್ನೂ ಕಳೆದುಕೊಂಡು ಕಳಪೆ ಆರಂಭ ಪಡೆಯಿತು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಋತುರಾಜ್ ಗೈಕ್ವಾಡ್ ಕೇವಲ 5 ರನ್ ಗಳಿಸಿ ರನ್ ಔಟ್ ಆದರು. ಡು ಪ್ಲೆಸಿಸ್ (43) ಹಾಗೂ ಜಾಧವ್ 26) ರನ್ ಗಳಿಸಿದ್ದು ಹೊರತುಪಡಿಸಿ ಚೆನ್ನೈ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಪಡೆ, ಪೃಥ್ವಿ ಶಾ ಗಳಿಸಿದ ಅರ್ಧಶತಕದ ನೆರವಿನಿಂದ 175 ರನ್ ಕಲೆಹಾಕಿದ್ದು. 43 ಎಸೆತಗಳನ್ನು ಎದುರಿಸಿದ್ದ ಶಾ 9 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 64 ರನ್ ಗಳಿಸಿದ್ದರು. ಶಿಖರ್ ಧವನ್ (35), ರಿಷಭ್ ಪಂತ್ (ಅಜೇಯ 37) ಮತ್ತು ನಾಯಕ ಶ್ರೇಯಸ್ ಅಯ್ಯರ್ (26) ಅವರೂ ಉಪಯುಕ್ತ ಕಾಣಿಕೆ ನೀಡಿದರು.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಪಡೆ ಹಾಗೂ ಬೌಲಿಂಗ್ ವಿಭಾಗ ಎರಡೂ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.