ದುಬೈ:ಸನ್ ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಪವರ್ ಪ್ಲೇನಲ್ಲೇ ನಮ್ಮ ತಂಡವನ್ನು ಸೋಲಿಸಿದರು ಎಂದು ಡೆಲ್ಲಿ ತಂಡದ ನಾಯಕ ಶ್ರೇಯಸ್ ಐಯ್ಯರ್ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್, "ನಾವು ಪವರ್ ಪ್ಲೇನಲ್ಲಿಯೇ ಪಂದ್ಯ ಕಳೆದುಕೊಂಡೆವು. ಮೊದಲ ಆರು ಓವರ್‌ಗಳಲ್ಲಿ 70 ರನ್ ಗಳಿಸುವುದು ನಿಜಕ್ಕೂ ಶ್ಲಾಘನೀಯ. ನಮ್ಮ ಬೌಲರ್‌ಗಳ ಮೇಲೆ ಅವರು ಅದ್ಭುತವಾಗಿ ಸವಾರಿ ಮಾಡಿದ್ರು" ಎಂದು ಹೇಳಿದ್ದಾರೆ.
ವಾರ್ನರ್ ಮತ್ತು ಸಹಾ ಮೊದಲ 10 ಓವರ್‌ಗಳಲ್ಲಿ 107 ರನ್‌ಗಳ ಜೊತೆಯಾಟವಾಡಿದ್ರು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಉಭಯ ಆಟಗಾರರು ಡೆಲ್ಲಿ ಬೌಲರ್‌ಗಳ ಬೆವರಿಳಿಸಿದ್ರು.
ಈ ಸೋಲು ನಮಗೆ ದೊಡ್ಡ ನಷ್ಟವಾಗಿದೆ. ನಮಗೆ ಇನ್ನೂ ಎರಡು ಪಂದ್ಯಗಳು ಉಳಿದಿದ್ದು, ಒಂದು ಗೆಲುವು ಮುಖ್ಯವಾಗಿದೆ. ಕಳೆದ ಮೂರು ಪಂದ್ಯಗಳಿಂದ ನಾವು ಕಾಯುತ್ತಿರುವುದು ಅದನ್ನೇ. ಸತತ ಸೋಲುಗಳು ನಮ್ಮ ಮೇಲೆ ಒತ್ತಡ ಹೇರುತ್ತಿವೆ. ನಮ್ಮ ತಂಡದ ಆಟಗಾರರು ನಿಜವಾಗಿಯೂ ಬಲಶಾಲಿಗಳು. ಈ ಸೋಲು ಖಂಡಿತವಾಗಿಯೂ ನಮ್ಮನ್ನು ಪ್ರೇರೇಪಿಸುತ್ತದೆ" ಎಂದು ಐಯ್ಯರ್ ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿ 220 ರನ್‌ಗಳ ಗುರಿ ನೀಡಿತು. ಬೃಹತ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್‌ಗಳಲ್ಲಿ 131 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 88 ರನ್‌ಗಳ ಅಂತರದ ಸೋಲು ಕಂಡಿದೆ.