ದುಬೈ: ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಚೆಂಡಿನ ಮೇಲೆ ಲಾಲಾರಸ ಹಚ್ಚುವುದನ್ನು ಗುರುತಿಸಲಾಗಿದೆ.
ಮೂರನೇ ಓವರ್‌ನ ಐದನೇ ಎಸೆತದಲ್ಲಿ ಸುನಿಲ್ ನರೈನ್ ಬೌಲಿಂಗ್ ಮಾಡುವಾಗ ಉತಪ್ಪ ಚೆಂಡಿನ ಮೇಲೆ ಲಾಲಾರಸ ಹಚ್ಚುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಚೆಂಡನ್ನು ಹೊಳೆಯುವಂತೆ ಮಾಡಲು ಲಾಲಾರಸದ ಬಳಕೆಯನ್ನು ಐಸಿಸಿ ನಿಷೇಧಿಸಿದೆ.
ಚೆಂಡು ಹೊಳೆಯಲು ಲಾಲಾರಸವನ್ನು ಬಳಸಲು ಆಟಗಾರರಿಗೆ ಅನುಮತಿಸಲಾಗುವುದಿಲ್ಲ. ಆಟಗಾರ ಚೆಂಡಿಗೆ ಲಾಲಾರಸ ಹಚ್ಚಿದರೆ, ಆಟಗಾರರಿಗೆ ಹೊಂದಾಣಿಕೆಯ ಆರಂಭಿಕ ಅವಧಿಯಲ್ಲಿ ಅಂಪೈರ್‌ಗಳು ಪರಿಸ್ಥಿತಿಯನ್ನು ಸ್ವಲ್ಪ ಮೃದುತ್ವದಿಂದ ನಿರ್ವಹಿಸುತ್ತಾರೆ. ಆದರೆ ಇದು ಪುನರಾವರ್ತನೆಯಾದರೆ ತಂಡಕ್ಕೆ ಎಚ್ಚರಿಕೆ ನೀಡಲಾಗುತ್ತದೆ ಎಂದು ಐಸಿಸಿ ಅಧಿಸೂಚನೆಯಲ್ಲಿ ತಿಳಿಸಿದೆ.
ಒಂದು ತಂಡಕ್ಕೆ ಇನ್ನಿಂಗ್ಸ್‌ಗೆ ಎರಡು ಬಾರಿ ಎಚ್ಚರಿಕೆ ನೀಡಬಹುದು. ಆದರೆ ಪದೇ ಪದೆ ಚೆಂಡಿನ ಮೇಲೆ ಲಾಲಾರಸ ಬಳಸಿದರೆ ಬ್ಯಾಟಿಂಗ್ ನಡೆಸುವ ತಂಡಕ್ಕೆ 5 ರನ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಚೆಂಡಿಗೆ ಲಾಲಾರಸ ಹಚ್ಚಿದಾಗಲೆಲ್ಲ ಆಟವನ್ನು ಪುನಃ ಪ್ರಾರಂಭಿಸುವ ಮೊದಲು ಅಂಪೈರ್‌ಗಳಿಗೆ ಚೆಂಡನ್ನು ಸ್ವಚ್ಛಗೊಳಿಸಲು ಸೂಚಿಸಲಾಗುತ್ತದೆ.
ಬುಧವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 37 ರನ್ಗಳ ಜಯ ಸಾಧಿಸಿದೆ. ಟೂರ್ನಿಯಲ್ಲಿ ಸತತವಾಗಿ 2 ಪಂದ್ಯ ಜಯಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.