ನವದೆಹಲಿ : ಕಳೆದ 8 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಕಪ್ ಗೆಲ್ಲಿಸಿಕೊಡಲು ವಿಫಲರಾದ ನಾಯಕ ವಿರಾಟ್ ಕೊಹ್ಲಿಯನ್ನು ಗಂಭೀರ್ ಟೀಕಿಸಿದ್ದು, ನಾಯಕತ್ವ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಹೇಳಿದ್ದಾರೆ.
ನೇರ ಮಾತಿಗೆ ಹೆಸರುವಾಸಿಯಾಗಿರುವ ಗಂಭೀರ್, ಟೀಂ ಇಂಡಿಯಾಗೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಅತ್ಯಂತ ಯಶಸ್ವಿ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಮತ್ತು ಐಪಿಎಲ್ನಲ್ಲಿ ನಾಲ್ಕು ಕಪ್ ಗೆದ್ದಿರುವ ರೋಹಿತ್ ಶರ್ಮಾ ಅವರೊಂದಿಗೆ ಕೊಹ್ಲಿ ಹೆಸರನ್ನು ತೆಗೆದುಕೊಳ್ಳಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಆರ್‌ಸಿಬಿಯ ನಾಯಕತ್ವದಿಂದ ಕೊಹ್ಲಿಯನ್ನು ತೆಗೆದುಹಾಕಬೇಕೆ ಎಂದು ಕೇಳಿದಾಗ, ಗಂಭೀರ್, ನೂರಕ್ಕೆ ನೂರರಷ್ಟು ಈ ಮಾತು ನಿಜ. ಯಾಕೆಂದರೆ, ಸಮಸ್ಯೆ ಹೊಣೆಗಾರಿಕೆಯ ಬಗ್ಗೆ ಇದೆ. ಎಂಟು ವರ್ಷಗಳಿಂದ ಟ್ರೋಫಿ ಗೆದ್ದುಕೊಡಲು ಸಾಧ್ಯವಾಗಿಲ್ಲ, 8 ವರ್ಷ ಎಂದರೆ ಕಡಿಮೆ ಸಮಯ ಅಲ್ಲ ಎಂದಿದ್ದಾರೆ.
ಕಪ್ ಗೆದ್ದು ಕೊಡಲು ಸಾಧ್ಯವಾಗದಿದ್ದರೂ ನಾಯಕತ್ವ ಸ್ಥಾನದಲ್ಲಿ ಮುಂದುವರೆಯುತ್ತಿರುವ ಯಾವುದೇ ಒಬ್ಬ ಆಟಗಾರನ ಹೆಸರು ಹೇಳಿ ನೋಡೋಣ ಎಂದು ಗಂಭೀರ್ ಪ್ರಶ್ನಿಸಿದ್ದಾರೆ. ಅಶ್ವಿನ್ 2 ವರ್ಷ ಪಂಜಾಬ್ ತಂಡ ಮುನ್ನಡೆಸಿದ್ರು. ಯಶಸ್ವಿಯಾಗಲು ಸಾಧ್ಯವಾಗಲಿಲ್ಲ, ಅವರನ್ನು ನಾಯಕತ್ವ ಸ್ಥಾನದಿಂದ ತೆಗೆದು ಹಾಕಲಾಯಿತು.
ಕಪ್ ಗೆಲ್ಲಲು ಸಾಧ್ಯವಾಗದೇ ಇರುವುದಕ್ಕೆ ನಾಯಕನಾಗಿ ಕೊಹ್ಲಿ ಜವಾಬ್ದಾರಿ ಹೊರಬೇಕು ಎಂದು ಗಂಭೀರ್ ಹೇಳಿದ್ದಾರೆ.