ದುಬೈ :ಮುಂಬೈ ವಿರುದ್ಧ ಬುಮ್ರಾ ಎಸೆದ ಸೂಪರ್ ಓವರ್ನಲ್ಲಿ ನಾನಾಡಿದ್ದ ಪುಲ್ ಶಾಟ್ ಪಂದ್ಯದ ಬಗೆಗಿನ ನನ್ನ ಮನಸ್ಥಿತಿಯನ್ನೇ ಬದಲಿಸಿತು. ಅನಗತ್ಯವಾಗಿ ಒತ್ತಡ ತಂದುಕೊಳ್ಳದೆ, ಆಟದ ಮೇಲೆ ಕೇಂದ್ರೀಕೃತನಾಗುವಂತೆ ಮಾಡಿತು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸಿಎಸ್ಕೆ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಕೊಹ್ಲಿ ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದರು. ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಹೆಚ್ಚಿನದೇನೂ ಮಾಡಲೆತ್ನಿಸಿ ನನ್ನ ಮೇಲೆ ಒತ್ತಡ ತಂದುಕೊಳ್ಳುತ್ತಿದೆ. ಈಗ ಯಾವ ಎಸೆತಕ್ಕೆ ಹೇಗೆ ಆಡಬೇಕೆಂಬ ಯೋಜನೆ ರೂಪಿಸಿಕೊಂಡಿದ್ದೇನೆ. ಜವಾಬ್ದಾರಿ ಬಗ್ಗೆ ಜಾಸ್ತಿ ಯೋಚಿಸದೆ, ಎಲ್ಲರಂತೆ ತಾನೂ ಒಬ್ಬ ಆಟಗಾರ ಎಂದುಕೊಂಡು ಮೈದಾನಕ್ಕಿಳಿಯಬೇಕು. ಜವಾಬ್ದಾರಿ ಬಗ್ಗೆಯೇ ನೀವು ಹೆಚ್ಚು ಯೋಚಿಸಿದರೆ, ನೀವು ನಿಮ್ಮ ಆಟ ಆಡುವುದಿಲ್ಲ. ಕೌಶಲ್ಯವೂ ಕೂಡ ತಂಡದ ಯಶಸ್ಸಿಗೆ ಅಗತ್ಯ. ಆ ಸೂಪರ್ ಓವರ್ನಲ್ಲಿ ಪ್ರತಿ ಎಸೆತದಲ್ಲೂ ರನ್ ಗಳಿಸುವುದು ಅಗತ್ಯವಿತ್ತು, ಇಲ್ಲದಿದ್ದರೆ ನಾವು ಸೋಲುವ ಸಾಧ್ಯತೆ ಇರುತ್ತದೆ. ಆ ಸಂದರ್ಭವು ನಿಜವಾಗಿಯೂ ನನ್ನ ಮನಸ್ಥಿತಿ ಬದಲಿಸಿತು. ಬಳಿಕ ನಾನು ತರಬೇತಿ, ಬ್ಯಾಟಿಂಗ್ನ್ನು ಆನಂದಿಸಿದೆ ಎಂದಿದ್ದಾರೆ.
ಹಿಂದಿನ ಪಂದ್ಯದಲ್ಲೂ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೆ. ಅದನ್ನೇ ಸಿಎಸ್ಕೆ ವಿರುದ್ಧ ಮುಂದುವರಿಸುವ ಯೋಚನೆಯೊಂದಿಗೆ ಬ್ಯಾಟಿಂಗ್ ಮಾಡಿದೆ. ಒಂದು ಹಂತದಲ್ಲಿ 30 ಎಸೆತಗಳಲ್ಲಿ 34 ರನ್ ಗಳಿಸಿದ್ದೆ, ಹೀಗೆ 100ಕ್ಕಿಂತ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದರೆ, ಮುಂದೆ ಕೆಲ ಓವರ್ಗಳಲ್ಲಿ ಹೆಚ್ಚಿನ ರನ್ ಪೇರಿಸಬಹುದು. 2ನೇ ಟೈಂ ಔಟ್ ವೇಳೆ ಅಂತಿಮವಾಗಿ 140ರಿಂದ 150 ರನ್ ಗಡಿ ತಲುಪುವ ಬಗ್ಗೆ ಮಾತನಾಡಿಕೊಂಡಿದ್ದೆವು. ಆದರೆ ಅದಕ್ಕಿಂತಲೂ ಹೆಚ್ಚಿನ ರನ್ ಗಳಿಸುವಲ್ಲಿ ಯಶಸ್ವಿಯಾದೆವು ಎಂದು ಕೊಹ್ಲಿ ಹೇಳಿದರು.
ಪ್ರತಿ ಚೆಂಡನ್ನು ಕ್ರೀಡಾಂಗಣದ ವೀಕ್ಷಕ ಗ್ಯಾಲರಿಯ ಎರಡನೇ ಹಂತಕ್ಕೆ ಹೊಡೆಯಲು ಪ್ರಯತ್ನಿಸುವ ಬದಲು, ಆಟದ ಬಗ್ಗೆ ಗೌರವಯುತವಾಗಿರುವುದು ಬಹಳ ಮುಖ್ಯ. ಅದನ್ನೇ ಅನುಭವ ಅಂತ ಹೇಳುವುದು. ಬಹಳ ಕ್ರಿಕೆಟ್, ವಿಶೇಷವಾಗಿ ಟಿ-20 ಕ್ರಿಕೆಟ್ ಆಡಿದ್ದರಿಂದ ಸಾಕಷ್ಟು ನಾನು ಕಲಿತಿದ್ದೇನೆ. ಇದೊಂದು ಆರ್ಸಿಬಿಯ ಆಲ್ರೌಂಡರ್, ಪರಿಪೂರ್ಣ ಪ್ರದರ್ಶನ. ಪಂದ್ಯದ ಮೊದಲಾರ್ಧದಲ್ಲಿ ನಾವು ಹಿನ್ನಡೆಯಲ್ಲಿದ್ದರೂ, ಬಳಿಕ ಯಶಸ್ಸು ಸಾಧಿಸಿದೆವು. ಎರಡು ಅಂಕ ಪಡೆಯಲು ಬಹಳ ಸಂತೋಷವಾಗುತ್ತಿದೆ. ಮುಂದೆ ಒಂದಾದ ನಂತರ ಒಂದು ಪಂದ್ಯ ಇರುವುದರಿಂದ ಈ ಗೆಲುವಿನ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಅಗತ್ಯವಿತ್ತು ಎಂದರು.
ಸಿಎಸ್ಕೆ ವಿರುದ್ಧ ಬ್ಯಾಟಿಂಗ್ನಲ್ಲಿ ಏಕಾಂಗಿ ಹೋರಾಟದ ಮೂಲಕ ನಾಯಕನ ಆಟವಾಡಿದ್ದ ಕೊಹ್ಲಿ 52 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿದ್ದರು. ತಂಡದ ಮೊತ್ತವನ್ನು 169ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.