ದುಬೈ:ಐಪಿಎಲ್‌ನ ಪದಾರ್ಪಣೆ ಪಂದ್ಯದಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಅರ್ಧ ಶತಕ ಗಳಿಸಿ ಕನ್ನಡಿಗರ ಮನ ಗೆದ್ದ ಆರ್‌ಸಿಬಿಯ ದೇವದತ್ ಪಡಿಕ್ಕಲ್ ಸ್ಫೋಟಕ ಆಟದ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ.
ಬ್ಯಾಟಿಂಗ್ ವೇಳೆ ಸಾಥ್ ನೀಡಿದ್ದ ಆರೋನ್ ಫಿಂಚ್ ಹೆಚ್ಚಿನ ಆತ್ಮಸ್ಥೈರ್ಯ ತುಂಬಿದರು. ಹೀಗಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ತಮ್ಮ ಸ್ಫೋಟಕ ಬ್ಯಾಟಿಂಗ್ ಹಿಂದಿನ ಸತ್ಯವನ್ನು ಯಜುವೇಂದ್ರ ಚಾಹಲ್ ಜೊತೆಗೆ ನಡೆದ ಸಂಭಾಷಣೆ ವೇಳೆ ಹಂಚಿಕೊಂಡಿದ್ದಾರೆ.
ಆರ್‌ಸಿಬಿ ಪರ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುತ್ತಿರುವ ಸುದ್ದಿ ತಿಳಿದು ಸ್ವಲ್ಪ ನರ್ವಸ್ ಆದೆ. ಬ್ಯಾಟಿಂಗ್‌ಗೆ ಬಂದಾಗ ಕ್ರೀಸ್‌ಗೆ ಅಂಟಿ ಆಟವಾಡಬೇಕೆಂದು ನಿರ್ಧರಿಸಿದೆ. ಆಡಿದ ಮೊದಲೆರಡು ಎಸೆತಗಳನ್ನು ದಿಟ್ಟವಾಗಿ ಎದುರಿಸಿದೆ.
ಕಳೆದೊಂದು ತಿಂಗಳಿನಿಂದ ನಾವು ಇಲ್ಲಿ ಅಭ್ಯಾಸ ಮಾಡುತ್ತಿದ್ದೇವೆ. ವಿರಾಟ್ ಭಾಯ್ ನಮ್ಮೊಂದಿಗೆ ಚರ್ಚಿಸುತ್ತಿರುತ್ತಾರೆ. ಇವರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ತಮ್ಮ ನಾಯಕನ ಗುಣಗಾನ ಮಾಡುವುದನ್ನ ಪಡಿಕ್ಕಲ್ ಮರೆಯಲಿಲ್ಲ.
ಪದಾರ್ಪಣೆ ಪಂದ್ಯದಲ್ಲಿ ಫಿಂಚ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಕರ್ನಾಟಕದ ದೇವದತ್ ಪಡಿಕ್ಕಲ್ 56 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಆ ಮೂಲಕ ತಾವು ಪದಾರ್ಪಣೆ ಮಾಡಿದ ಎಲ್ಲಾ ವಿಭಾಗದ ಪಂದ್ಯಗಳಲ್ಲೂ ಪಡಿಕ್ಕಲ್ ಅರ್ಧ ಶತಕಗಳನ್ನು ಗಳಿಸಿದ್ದಾರೆ. ಪ್ರಥಮ ದರ್ಜೆ, ಲಿಸ್ಟ್-ಎ, ಟಿ-ಟ್ವಿಂಟಿ ಹಾಗೂ ಐಪಿಎಲ್‌ನಲ್ಲೂ ಅರ್ಧ ಶತಕ ಗಳಿಸಿದ್ದಾರೆ.
ಸ್ಪಿನ್ನರ್ ಯಜುವೇಂದ್ರ ಚಾಹಲ್ ಜೊತೆಗೆ ಪಡಿಕ್ಕಲ್ ಮಾತನಾಡಿರುವ ವಿಡಿಯೋವನ್ನು ಐಪಿಎಲ್ ಅಧಿಕೃತ ವೆಬ್ಬ್ಸೈಟ್ನಲ್ಲಿ ಪೋಸ್ಟ್ ಮಾಡಲಾಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 10 ರನ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ನೀಡಿದ 164 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ಡೇವಿಡ್ ವಾರ್ನರ್ ಪಡೆ ವಿಫಲವಾಯಿತು.
ಸ್ಫೋಟಕ ಆಟಗಾರರಾದ ಜಾನಿ ಬ್ರೈಸ್ಟೋ, ಮನೀಶ್ ಪಾಂಡೆ ಹಾಗೂ ಆಲ್‌ರೌಂಡರ್ ವಿಜಯ್ ಶಂಕರ್ ಅವರ ವಿಕೆಟ್ ಪಡೆಯುವ ಮೂಲಕ ಚಹಲ್ ಸನ್ ರೈಸರ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದು ಪಂದ್ಯಕ್ಕೆ ತಿರುವು ನೀಡಿದರು. ಸೆಪ್ಟೆಂಬರ್ 24ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆರ್‌ಸಿಬಿ 2ನೇ ಪಂದ್ಯ ಆಡಲಿದೆ.