ದುಬೈ:ಇಲ್ಲಿನಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡು ಮೈದಾನದಿಂದ ಹೊರ ನಡೆದಿದ್ದು ತಂಡಕ್ಕೆ ಹಿನ್ನಡೆಯಾಗಿದೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಡೇವಿಡ್ ವಾರ್ನರ್, ನಾನು ಮೈದಾನದಲ್ಲಿದ್ದ ಕಾರಣ ಗಾಯದ ತೀವ್ರತೆಯ ಬಗ್ಗೆ ನನಗೆ ತಿಳಿದಿಲ್ಲ. ಈ ಬಗ್ಗೆ ತಂಡದ ಫಿಸಿಯೋ ಬಳಿ ವಿಚಾರಿಸಲಾಗುತ್ತದೆ ಎಂದಿದ್ದಾರೆ.
ಎಡ ತೊಡೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ 19ನೇ ಓವರ್‌ನ ಮೊದಲ ಎಸೆತದ ನಂತರ ಭುವಿ ಮೈದಾನದಿಂದ ಹೊರ ನಡೆದರು. ನಂತರ ಖಲೀಲ್ ಅಹ್ಮದ್ ಓವರ್‌ನ ಉಳಿದ ಎಸೆತಗಳನ್ನು ಬೌಲ್ ಮಾಡಬೇಕಾಯಿತು.
ನಿನ್ನೆ ನಡೆದ ಪಂದ್ಯದಲ್ಲಿ 3.1 ಓವರ್ ಬೌಲಿಂಗ್ ನಡೆಸಿದ ಭುವನೇಶ್ವರ್ ಕುಮಾರ್ 20 ರನ್ ಬಿಟ್ಟುಕೊಟ್ಟು ಶೇನ್ ವಾಟ್ಸನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. 165 ರನ್ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿ 7 ರನ್ಗಳಿಂದ ಸೋಲು ಕಂಡಿದೆ.