ಅಬುಧಾಬಿ:ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್ ಅಂತರದಲ್ಲಿ ಸೋಲು ಕಂಡಿರುವುದಕ್ಕೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತಮ್ಮ ಬ್ಯಾಟ್ಸ್‌ಮನ್‌ಗಳನ್ನು ದೂಷಿಸಿದ್ದಾರೆ.
ಬ್ಯಾಟಿಂಗ್‌ನಲ್ಲಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ತಂಡ ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತ್ತು. ಆದರೆ ಅಂತಿಮವಾಗಿ ತಮ್ಮ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ರೋಹಿತ್ ಶರ್ಮಾ, ಸಿಎಸ್ಕೆ ತಂಡಕ್ಕೆ ಡು ಪ್ಲೆಸಿಸ್ ಮತ್ತು ರಾಯುಡು ನೆರವಾದಂತೆ, ನಮ್ಮ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ನಮಗೆ ನೆರವಾಗಲಿಲ್ಲ. ಮೊದಲ 10 ಓವರ್‌ಗಳಲ್ಲಿ ನಾವು 85 ರನ್ ಗಳಿಸಿದ್ದೆವು. ಕೊನೆಯಲ್ಲಿ ಉತ್ತಮವಾಗಿ ಬೌಲ್ ಮಾಡಿದ ಸಿಎಸ್ಕೆ ಬೌಲರ್ಸ್ ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು ಎಂದಿದ್ದಾರೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಮುಂಬೈ ತಂಡ
ಇವಿನ್ನೂ ಆರಂಭಿಕ ದಿನಗಳು. ಈ ಆಟದಿಂದ ಕೆಲವು ವಿಷಯಗಳನ್ನು ಕಲಿತಿದ್ದೇವೆ. ಈ ಪಂದ್ಯದಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ. ಆದರೆ ಅವುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಕ್ಕಾಗಿ ಚುರುಕಾಗಿ ಹೊರಬರುತ್ತೇವೆ ಎಂಬ ಆಶಾಭಾವನೆ ಇದೆ ಎಂದಿದ್ದಾರೆ.
ಮೈದಾನದಲ್ಲಿ ಅಭಿಮಾನಿಗಳಿಲ್ಲದೆ ಆಡುವ ಅನುಭವದ ಬಗ್ಗೆ ಕೇಳಿದಾಗ, ಜನರು ನಮ್ಮನ್ನು ಹುರಿದುಂಬಿಸುತ್ತಿದ್ದರು. ಆದರೆ ಈ ಬಾರಿ ಆ ಅನುಭವ ಇರುವುದಿಲ್ಲ ಎಂದು ಗೊತ್ತಿತ್ತು, ಇದೊಂದು ಸಾಮಾನ್ಯವಾದ ಹೊಸ ಅನುಭವ. ಆದರೆ ಶೀಘ್ರದಲ್ಲೇ ಎಲ್ಲ ಉತ್ತಮಗೊಳ್ಳುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.