ದುಬೈ:ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಮಧ್ಯಮ ಕ್ರಮಾಂಕದ ಆಟಗಾರರು, ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆಯನ್ನು ಜೀವಂತವಾಗಿರಿಸಿದರು ಎಂದು ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಸಂತೋಷಪಟ್ಟಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್, "ನಾವು ಮಧ್ಯಮ ಕ್ರಮಾಂಕವನ್ನು ಹೊಂದಿದ್ದೇವೆ ಎಂದು ಜನರಿಗೆ ತೋರಿಸಿದ್ದೇವೆ. ಈ ಬಗ್ಗೆ ಯಾವಾಗಲೂ ಪ್ರಶ್ನೆ ಉದ್ಭವಿಸುತ್ತಿತ್ತು. ಹಿಂದಿನ ಪಂದ್ಯಗಳಲ್ಲಿ ಅವರಿಗೆ ಬ್ಯಾಟಿಂಗ್ ಮಾಡಲು ಹೆಚ್ಚು ಸಮಯವಿರಲಿಲ್ಲ. ಕಳೆದ ಪಂದ್ಯದಲ್ಲಿ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಿರಲಿಲ್ಲ. ಅವರು ಉತ್ತಮವಾಗಿ ಬ್ಯಾಟ್ ಬೀಸಿರುವುದು ಸಂತೋಷವಾಗಿದೆ" ಎಂದು ಹೇಳಿದ್ದಾರೆ.