ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಹಲವರಿಗೆ ನಂಬಿಕೆಯೇ ಇಲ್ಲ ಎಂದು ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಮಾತನಾಡಿ, ಅನೇಕ ಜನರಿಗೆ ತಂಡದ ಸಾಮರ್ಥ್ಯಗಳ ಬಗ್ಗೆ ನಂಬಿಕೆ ಇಲ್ಲ. ಆದರೆ ಎಲ್ಲಾ ಆಟಗಾರರು ವಿಶ್ವಾಸ ಹೊಂದಿದ್ದಾರೆ ಎಂದಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್, "ಸಿರಾಜ್‌ಗೆ 2ನೇ ಓವರ್ ಬೌಲಿಂಗ್ ನೀಡಲು ತುಂಬಾ ತಡವಾಗಿ ನಿರ್ಧಾರ ಮಾಡಿದ್ವಿ, ಅದನ್ನು ವಾಷಿಂಗ್ಟನ್ ಸುಂದರ್‌ಗೆ ನೀಡುವ ಬಗ್ಗೆ ಯೋಚಿಸುತ್ತಿದ್ದೆ. ನಮ್ಮ ತಂಡದ ಮ್ಯಾನೇಜ್ಮೆಂಟ್ ಸರಿಯಾದ ಸಂಸ್ಕೃತಿಯನ್ನು ತಂದಿದೆ. ನಮಲ್ಲಿ ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಇದೆ. ಆಟಗಾರರು ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಅದಕ್ಕಾಗಿಯೇ ಉತ್ತಮ ಫಲಿತಾಂಶ ದೊರಕಿದೆ" ಎಂದಿದ್ದಾರೆ.
ಅಲ್ಲದೆ "ಆರ್ಸಿಬಿ ತಂಡದ ಸಾಮರ್ಥ್ಯದ ಮೇಲೆ ಹಲವರಿಗೆ ನಂಬಿಕೆ ಇಲ್ಲ. ಆದರೆ ನಮ್ಮ ಡ್ರೆಸ್ಸಿಂಗ್ ರೂಮ್ನಲ್ಲಿ ಸದಸ್ಯರಿಗೆ ಆ ನಂಬಿಕೆ ಇದೆ. ಇದೇ ಮುಖ್ಯವಾದದ್ದು. ನೀವು ವಿಶ್ವದ ಅತ್ಯುತ್ತಮ ಆಟಗಾರರನ್ನು ಹೊಂದಿರಬಹುದು. ಆದರೆ ನಿಮಗೆ ಅವರ ಮೇಲೆ ನಂಬಿಕೆ ಇಲ್ಲದಿದ್ದರೆ ಯಾವುದೇ ಪ್ರಯೋಜನವಿಲ್ಲ" ಎಂದಿದ್ದಾರೆ.
ಕೆಕೆಆರ್ ವಿರುದ್ಧ ಮಾರಕ ದಾಳಿ ನಡೆಸಿದ ಆರ್ಸಿಬಿ ಬೌಲರ್ಗಳು 84 ರನ್ಗಳಿಕೆ ಕೋಲ್ಕತ್ತಾ ತಂಡವನ್ನು ನಿಯಂತ್ರಿಸಿದ್ರು. 85 ರನ್ಗಳ ಸುಲಭದ ಗುರಿ ಬೆನ್ನಟ್ಟಿದ್ದ ಆರ್ಸಿಬಿ ತಂಡ 13.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.