ಲಂಡನ್ :ವಿಶ್ವದ ಶ್ರೀಮಂತ ಲೀಗ್ ಎಂಬ ಖ್ಯಾತಿ ಪಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲಷ್ಟೇ ಅಲ್ಲ, ವೀಕ್ಷಣೆಯಲ್ಲಿ ಇಂಗ್ಲೆಂಡ್ನಲ್ಲೂ ಇತರೆ ಕ್ರೀಡೆಗಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದೆ.
ಕೋವಿಡ್ ಕಾರಣ ನೇರವಾಗಿ ಮುಚ್ಚಿದ ಸ್ಟೇಡಿಯಂನಲ್ಲಿ ಐಪಿಎಲ್ ನಡೆಯುತ್ತಿದೆ. ಅಲ್ಲದೆ ಕೋವಿಡ್ ಹಾಗೂ ದೀರ್ಘ ಸಮಯದ ನಂತರ ಕ್ರಿಕೆಟ್ ಮರುಳುತ್ತಿರುವುದರಿಂದ ಐಪಿಎಲ್ ಹಲವು ಕ್ರಿಕೆಟ್ ಆಡುವ ದೇಶಗಳಲ್ಲೂ ಪ್ರಸಾರವಾಗುತ್ತಿದೆ. ಈಗಾಗಲೇ ವೀಕ್ಷಣೆಯಲ್ಲಿ ಕಳೆದ ವರ್ಷದ ದಾಖಲೆ ಬ್ರೇಕ್ ಮಾಡಿರುವ 13ನೇ ಆವೃತ್ತಿಯ ಐಪಿಎಲ್ ಇದೀಗ ವಿಶೇಷ ದಾಖಲೆಯೊಂದಕ್ಕೆ ಪಾತ್ರವಾಗಿದೆ.
ಇಂಗ್ಲೆಂಡ್ನ ಪ್ರಸಿದ್ಧ ಫುಟ್ಬಾಲ್ ಸ್ಪರ್ಧೆಯಾಗಿರುವ ಪ್ರೀಮಿಯರ್ ಲೀಗ್ ಅನ್ನೇ ಹಿಂದಿಕ್ಕುವ ಮೂಲಕ ಐಪಿಎಲ್ ವಿಶೇಷ ಸಾಧನೆಗೆ ಪಾತ್ರವಾಗಿದೆ. ಕಳೆದ ಕೆಲವು ವಾರಗಳಿಂದ ಐಪಿಎಲ್ ಅನ್ನು 2,50,000 ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದು ಇಂಗ್ಲೆಂಡ್ನ ಪ್ರೀಮಿಯರ್ ಲೀಗ್ ವೀಕ್ಷಣೆಗಿಂತಲೂ ಹೆಚ್ಚು ಎಂದು ವರದಿಯಿಂದ ತಿಳಿದು ಬಂದಿದೆ.
ಕ್ರಿಕೆಟ್ ಬೆಟ್ ಇಂಡಿಯಾ ವರದಿಗಳ ಪ್ರಕಾರ ಅಕ್ಟೋಬರ್ 12 ರಿಂದ18ರವರೆಗೆ ಸುಮಾರು 7,97,000 ಮಂದಿ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ನಲ್ಲಿ ಲೈವ್ ವೀಕ್ಷಣೆ ಮಾಡಿದ್ದಾರೆ. ಆದರೆ, ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ನ್ಯೂಕಾಸ್ಟಲ್ ಪಂದ್ಯ ಕೇವಲ 40,000 ವೀಕ್ಷಣೆ ಪಡೆದಿದೆ.
ಲಿವರ್ಪೋಲ್ ಹೋಮ್ ಮ್ಯಾಚ್ 1,10,000 ವೀಕ್ಷಣೆ ಹಾಗೂ ಅರ್ಸೆನೆಲ್ ಮತ್ತು ಲೈಸೆಸ್ಟರ್ ಸಿಟಿ ಪಂದ್ಯ 1,40,000 ವೀಕ್ಷಣೆ ಪಡೆದಿದೆ. ಇವೆಲ್ಲವೂ ಐಪಿಎಲ್ಗಿಂತ ಭಾರಿ ಹಿಂದುಳಿದಿವೆ ಎಂದು ತಿಳಿದು ಬಂದಿದೆ. ಆದರೆ, ಇದಕ್ಕೆ ನೈಜ ಕಾರಣ ಇಪಿಎಲ್ ಒಂದು ಪಂದ್ಯಕ್ಕೆ ಇಂತಿಷ್ಟು ಎಂದು ಹಣವನ್ನು ಏರಿಸಿರುವುದೇ ಎಂದು ತಿಳಿದು ಬಂದಿದೆ.