ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನ 41ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಒಟ್ಟು ಒಂಭತ್ತು ಪಂದ್ಯಗಳನ್ನು ಆಡಿರುವ ಮುಂಬೈ ಆರರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಸಿಎಸ್ಕೆ ತಂಡ 10 ಪಂದ್ಯಗಳನ್ನು ಆಡಿದ್ದು, ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 7 ಪಂದ್ಯಗಳನ್ನು ಕೈಚೆಲ್ಲಿದೆ.
ನೀರಸ ಪ್ರದರ್ಶನದಿಂದಾಗಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿರುವ ಸಿಎಸ್ಕೆ ತಂಡದ ಇಂದಿನ ಪಂದ್ಯದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಕಳೆದ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ಧೋನಿ, ಯುವ ಆಟಗಾರರಲ್ಲಿ ಪಂದ್ಯ ಗೆಲ್ಲಿಸುವ ಕಿಡಿ ಕಂಡು ಬಂದಿಲ್ಲ. ಮುಂದಿನ ಪಂದ್ಯಗಳಲ್ಲಿ ಒತ್ತಡ ಇರುವುದಿಲ್ಲ. ಹೀಗಾಗಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲಾಗುವುದು ಎಂದಿದ್ದರು.
ಉಳಿದಂತೆ ವಾಟ್ಸನ್, ಪ್ಲೆಸಿಸ್, ರಾಯುಡು, ಜಡೇಜಾ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್‌ನಲ್ಲಿ ದೀಪಕ್ ಚಾಹರ್, ಸ್ಯಾಮ್ ಕರ್ರನ್, ಕರಣ್ ಶರ್ಮಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಬಹುತೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ನೆರವಾಗುತ್ತಿದ್ದಾರೆ. ಡಿ ಕಾಕ್, ರೋಹಿತ್, ಸೂರ್ಯಕುಮಾರ್ ಯಾದವ್, ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಮುಂಬೈನ ಬ್ಯಾಟಿಂಗ್ ಬಲ.
ಬೌಲಿಂಗ್ನಲ್ಲೂ ಮುಂಬೈ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್ ಅದ್ಭುತವಾಗಿ ಸ್ಪೆಲ್ ಮಾಡುತ್ತಿದ್ದಾರೆ.
ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಾಗಿರುವ ಮುಂಬೈ ಹಾಗೂ ಚೆನ್ನೈ ಪರಸ್ಪರ 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರೋಹಿತ್ ಪಡೆ 17 ಹಾಗೂ ಧೋನಿ ಬಳಗ 12ರಲ್ಲಿ ಗೆಲುವು ಸಾಧಿಸಿದೆ.