ಕರ್ನಾಟಕ

karnataka

ETV Bharat / sports

ದ್ವಿತೀಯ ಪಂದ್ಯದಲ್ಲಿ ಚೆನ್ನೈಗೆ ರಾಯಲ್ 'ಚಾಲೆಂಜ್': ಹೈವೋಲ್ಟೇಜ್ ಪಂದ್ಯದಲ್ಲಿ ಗೆಲ್ಲೋದ್ಯಾರು? - ಆರ್​ಸಿಬಿ ಸಿಎಸ್​ಕೆ ಪಂದ್ಯ

4 ಪಂದ್ಯಗಳಲ್ಲಿ ಸೋಲು ಕಂಡು ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಿರುವ ಚೆನ್ನೈ ತಂಡ ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

royal challengers bangalore vs chennai super kings
ಸಿಎಸ್​ಕೆ-ಆರ್​ಸಿಬಿ ಮುಖಾಮುಖಿ

By

Published : Oct 10, 2020, 1:00 PM IST

ದುಬೈ: ಇಂದು ಸಂಜೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ​ಲೀಗ್​ನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ.

ಕೊಹ್ಲಿ ನಾಯಕತ್ವದ ಬೆಂಗಳೂರು ತಂಡ ಆಡಿದ 5 ಪಂದ್ಯಗಳಲ್ಲಿ 3 ಪಂದ್ಯ ಜಯಿಸಿದ್ದು, ಎರಡು ಪಂದ್ಯದಲ್ಲಿ ಸೋಲು ಕಂಡಿದೆ. ಇತ್ತ ಚೆನ್ನೈ ತಂಡ ಆಡಿದ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಜಯಗಳಿಸಿದ್ದು, 4 ಪಂದ್ಯಗಳನ್ನು ಕೈಚೆಲ್ಲಿದೆ.

ಗೆಲುವಿನ ವಿಶ್ವಾಸದಲ್ಲಿ ಕೊಹ್ಲಿ ಪಡೆ:

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆರ್​ಸಿಬಿ ತಂಡ ಇಂದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಟಿ-20 ಸ್ಪೆಷಲಿಸ್ಟ್​ಗಳಾದ ಫಿಂಚ್, ಕೊಹ್ಲಿ, ವಿಲಿಯರ್ಸ್ ಆರ್​ಸಿಬಿ ತಂಡದ ಶಕ್ತಿಯಾಗಿದ್ದಾರೆ, ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಆರಂಭದಿಂದ ಮಿಂಚುತ್ತಿದ್ದಾರೆ. ಗಾಯದ ಕಾರಣದಿಂದ ಹೊರಗುಳಿದಿದ್ದ ಕ್ರಿಸ್ ಮೋರಿಸ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಬೌಲಿಂಗ್​ನಲ್ಲಿ ಯುಜುವೇಂದ್ರ ಚಾಹಲ್ ಬೆಂಗಳೂರು ತಂಡದ ಶಕ್ತಿ. ನವದೀಪ್ ಸೈನಿ, ಇಸುರು ಉದಾನ, ವಾಷಿಂಗ್ಟನ್ ಸುಂದರ್ ಉತ್ತಮ ಪ್ರದರ್ಶನ ತೋರಿದ್ದಾರೆ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಿರಾಜ್ 2 ವಿಕೆಟ್ ಕಬಳಿಸಿದ್ದರು. ಒಂದು ವೇಳೆ ಇಂದಿನ ಪಂದ್ಯದಲ್ಲಿ ಮೋರಿಸ್ ಕಣಕ್ಕಿಳಿದರೆ ಬೆಂಗಳೂರು ಬೌಲಿಂಗ್​ ಬಲ ಮತ್ತಷ್ಟು ಹೆಚ್ಚಲಿದೆ.

ಬ್ಯಾಟಿಂಗ್​ನಲ್ಲಿ ಸಿಎಸ್​ಕೆ ವೈಫಲ್ಯ

ಬಲಿಷ್ಠ ಸಿಎಸ್​ಕೆ ತಂಡಕ್ಕೆ ಬ್ಯಾಟ್ಸ್​ಮನ್​ಗಳು ಕೈಕೊಡುತ್ತಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಕಳೆದ ಪಂದ್ಯದಲ್ಲಿ ವಾಟ್ಸನ್​ ಮತ್ತು ರಾಯುಡು ಹೊರತುಪಡಿಸಿ ಉಳಿದೆಲ್ಲ ಆಟಗಾರರು ಕಡಿಮೆ ರನ್​ಗಳಿಸಿ ಪೆವಿಲಿಯನ್ ಸೇರಿದ್ರು. ಅಂತ್ಯದಲ್ಲಿ ಬಂದ ಜಡೇಜಾ ಕೊಂಚ ಅಬ್ಬರಿಸಿದ್ರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ಚೆನ್ನೈ ಸೂಪರ್​ ಕಿಂಗ್ಸ್ ತಂಡ

ಕಳೆದ ಪಂದ್ಯದಲ್ಲಿ ಸಿಎಸ್​ಕೆ ಬೌಲರ್ಸ್​ ಉತ್ತಮ ಸ್ಪೆಲ್​ ಮಾಡಿದ್ರು. ಶಾರ್ದೂಲ್ ಠಾಕೂರ್, ಕರಣ ಶರ್ಮಾ, ಸ್ಯಾಮ್ ಕರ್ರನ್ ಮತ್ತು ಬ್ರಾವೋ ಉತ್ತಮ ಪ್ರದರ್ಶನ ನೀಡಿ ಕೆಕೆಆರ್​ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್ ಸೇರಿಸಿದ್ರು. ಆದರೆ ದೀಪಕ್ ಚಹಾರ್ ಕೊಂಚ ದುಬಾರಿಯಾಗಿದ್ದರು.

ಸಿಎಸ್​ಕೆ-ಆರ್​ಸಿಬಿ ಮುಖಾಮುಖಿ

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡ ಇಲ್ಲಿಯವರೆಗೆ ಸಿಎಸ್​ಕೆ ಮತ್ತು ಆರ್​ಸಿಬಿ ತಂಡಗಳು 24 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, ಆರ್​ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.

ABOUT THE AUTHOR

...view details