ಅಬುಧಾಬಿ: ಭಾನುವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ವೇಗಿ ಚ, ಮುಂಬೈ ಇಂಡಿಯನ್ಸ್ ವೇಗಿ ಬುಮ್ರಾ ಅವರಿಂದ ಪರ್ಪಲ್ ಕ್ಯಾಪ್ ಮರಳಿ ಪಡೆದಿದ್ದಾರೆ.
ಭಾನುವಾರದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ನಡೆಸಿದ ರಬಾಡ 29 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು. ಒಟ್ಟಾರೆ 16 ಪಂದ್ಯಗಳಿಂದ 29 ವಿಕೆಟ್ ಪಡೆದಿದ್ದಾರೆ. 14 ಪಂದ್ಯಗಳಿಂದ 27 ವಿಕೆಟ್ ಗಳಿಸಿರುವ ಬುಮ್ರಾ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಟ್ರೆಂಟ್ ಬೌಲ್ಟ್ 22 ವಿಕೆಟ್ ಪಡೆದುಕೊಂಡಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದು, ಆರೆಂಜ್ ಕ್ಯಾಪ್ ಅನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ರಾಹುಲ್ 14 ಪಂದ್ಯಗಳಿಂದ 670 ರನ್ ಗಳಿಸಿದ್ದಾರೆ. ಅವರ ನಂತರ ಡೆಲ್ಲಿ ಓಪನರ್ ಶಿಖರ್ ಧವನ್ 603 ರನ್ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ತಂಡವನ್ನು ಎದುರಿಸಲಿದ್ದು, ಶಿಖರ್ ಧವನ್ಗೆ ಕೆ.ಎಲ್. ರಾಹುಲ್ ಅವರನ್ನು ಹಿಂದಿಕ್ಕುವ ಅವಕಾಶ ಇದೆ. ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ 16 ಪಂದ್ಯಗಳಿಂದ 548 ರನ್ ಗಳಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.