ಅಬುಧಾಬಿ:ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕೆಟ್ಟ ಪ್ರದರ್ಶನ ತೋರಿದ್ದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಬ್ಯಾಟ್ಸ್ಮನ್ಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಂದ್ಯದಲ್ಲಿ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ 'ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳನ್ನು ನಿರಾಸೆಗೊಳಿಸಿದರು ಎಂದು ಹೇಳಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ ಕೆಕೆಆರ್ ವಿರುದ್ಧ 10 ರನ್ಗಳ ಸೋಲು ಅನುಭವಿಸಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೆ ಆಡಿದ 6 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಕೈಚೆಲ್ಲಿದೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ, ಮಧ್ಯಮ ಓವರ್‌ಗಳಲ್ಲಿ ಕೆಕೆಆರ್ ತಂಡದ ಬೌಲರ್‌ಗಳು ಎರಡು-ಮೂರು ಉತ್ತಮ ಓವರ್‌ಗಳನ್ನು ಎಸೆದರು. ನಂತರ ನಾವು ವಿಕೆಟ್‌ಗಳನ್ನು ಕಳೆದುಕೊಂಡೆವು. ಆ ಅವಧಿಯಲ್ಲಿ ನಮ್ಮ ಬ್ಯಾಟಿಂಗ್ ವಿಭಿನ್ನವಾಗಿದ್ದರೆ ಫಲಿತಾಂಶವೂ ವಿಭಿನ್ನವಾಗುತ್ತಿತ್ತು ಎಂದು ಹೇಳಿದ್ದಾರೆ.
'ಸ್ಯಾಮ್ ಕರ್ರನ್ ನಿಜವಾಗಿಯೂ ಉತ್ತಮ ಪ್ರದರ್ಶನ ತೋರಿದ್ರು. ಕೆಕೆಆರ್ ತಂಡವನ್ನು 160 ರನ್ಗೆ ಕಟ್ಟಿಹಾಕಲು ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳನ್ನು ನಿರಾಸೆಗೊಳಿಸಿದರು. ಕೊನೆಯಲ್ಲಿ ಬೌಂಡರಿ ಗಳಿಸಲು ಸಾಧ್ಯವಾಗಲಿಲ್ಲ. ಯಾರಾದರೂ ಬ್ಯಾಕ್ ಆಫ್ ಲೆಂತ್ ಬೌಲಿಂಗ್ ಮಾಡಿದ್ರೆ, ಬೌಂಡರಿ ಬಾರಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ತಂಡಕ್ಕೆ ರಾಹುಲ್ ತ್ರಿಪಾಠಿ ಆಸರೆಯಾದ್ರು. 51 ಎಸೆತಗಳಲ್ಲಿ 81 ರನ್ ಗಳಿಸಿ ತಂಡದ ಮೊತ್ತ ಹೆಚ್ಚಸಿದರು. ಸಿಎಸ್‌ಕೆ ಪರ ಬ್ರಾವೋ ಮೂರು ವಿಕೆಟ್ ಪಡೆದರೆ, ಕರಣ್ ಶರ್ಮಾ, ಶಾರ್ದುಲ್ ಠಾಕೂರ್ ಮತ್ತು ಸ್ಯಾಮ್ ಕರ್ರನ್ ತಲಾ ಎರಡು ವಿಕೆಟ್ ಪಡೆದರು.
ಚೇಸಿಂಗ್ ಸಮಯದಲ್ಲಿ, ಶೇನ್ ವಾಟ್ಸನ್ 50 ರನ್ ಗಳಿಸಿದ್ರೆ, ಅಂತಿಮ ಹಂತದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ ಕೇವಲ ಎಂಟು ಎಸೆತಗಳಲ್ಲಿ 21 ರನ್ ಗಳಿಸಿದರು. ಆದರೆ ಸಿಎಸ್‌ಕೆ ತಂಡ ನಿಗದಿತ ಮೊತ್ತ ಕಲೆಹಾಕಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತು.