ದುಬೈ:ಕೊಲ್ಕತ್ತಾ ನೈಟ್ ರೈಡರ್ಸ್ನ ನಾಯಕ ದಿನೇಶ್ ಕಾರ್ತಿಕ್ ತಂಡದ ನಾಯಕತ್ವವನ್ನು ಇಯಾನ್ ಮಾರ್ಗನ್ಗೆ ವಹಿಸುವಂತೆ ಕೋರಿ ತಮ್ಮ ಅಭಿಪ್ರಾಯವನ್ನು ಕೆಕೆಆರ್ ಆಡಳಿತ ಮಂಡಳಿಗೆ ನೀಡಿದ್ದಾರೆ.
ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವಂತೆ ಹಾಗೂ ತಂಡಕ್ಕಾಗಿ ಇನ್ನೂ ಹೆಚ್ಚಿನ ಕೊಡುಗೆ ನೀಡುವ ಕಾರಣಕ್ಕೆ ಶ್ರಮ ವಹಿಸುವ ಅಗತ್ಯ ಇರುವ ಕಾರಣದಿಂದ ತಂಡದ ನಾಯಕತ್ವವನ್ನು ಇಯಾನ್ ಮಾರ್ಗನ್ಗೆ ಹಸ್ತಾಂತರಿಸುವ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಕೆಆರ್ನ ಕಾರ್ಯ ನಿರ್ವಹಣಾಧಿಕಾರಿ ವೆಂಕಿ ಮೈಸೂರು ''ದಿನೇಶ್ ಕಾರ್ತಿಕ್ರಂತಹ ಆಟಗಾರರನ್ನು ಹೊಂದಿರುವುದು ನಮ್ಮ ಅದೃಷ್ಟ. ಅವರು ತಂಡಕ್ಕಾಗಿ ಮೊದಲು ಆಲೋಚನೆ ಮಾಡುತ್ತಾರೆ. ಅವರು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ತುಂಬಾ ಧೈರ್ಯ ವಹಿಸುತ್ತಾರೆ. ಅವರ ಈ ನಿರ್ಧಾರದಿಂದ ನನಗೆ ಅಚ್ಚರಿಯಾಗಿದೆ. ಅವರ ನಿರ್ಧಾರಕ್ಕೆ ನಾವು ಗೌರವ ನೀಡುತ್ತೇವೆ'' ಎಂದಿದ್ದಾರೆ.
ಇದರ ಜೊತೆಗೆ 2019ರ ವಿಶ್ವಕಪ್ ವಿಜೇತ ಇಯಾನ್ ಮಾರ್ಗನ್ ಹೊಂದಿರುವುದಕ್ಕೂ ನಮಗೆ ಹೆಮ್ಮೆಯಿದೆ. ತಂಡಕ್ಕಾಗಿ ಇಯಾನ್ ಹಾಗೂ ದಿನೇಶ್ ಕಾರ್ತಿಕ್ ಒಗ್ಗಟ್ಟಿನಿಂದ ಹಾಗೂ ಬುದ್ದಿವಂತಿಕೆಯಿಂದ ಆಡುತ್ತಿದ್ದಾರೆ ವೆಂಕಿ ಮೈಸೂರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.