ಕರ್ನಾಟಕ

karnataka

ETV Bharat / sports

ಇಂದು ಕೆಕೆಆರ್ vs ಸಿಎಸ್​ಕೆ‌: ಗೆಲುವಿನ ಅಭಿಯಾನ ಮುಂದುವರೆಸುತ್ತಾ ಚೆನ್ನೈ?

ಕಳೆದ ಪಂದ್ಯದಲ್ಲಿ ಭರ್ಜರಿ 10 ವಿಕೆಟ್​ಗಳ ಜಯ ಸಾಧಿಸಿ ಗೆಲುವಿನ ಟ್ರ್ಯಾಕ್​ಗೆ ಮರಳಿರುವ ಸಿಎಸ್​ಕೆ ತಂಡ ಇಂದು ಅಬುಧಾಬಿಯಲ್ಲಿ ಕೆಕೆಆರ್​ ತಂಡವನ್ನು ಎದುರಿಸಲಿದೆ.

Kolkata Knight Riders vs Chennai Super Kings
ಕೆಕೆಆರ್​-ಸಿಎಸ್​ಕೆ ಮುಖಾಮುಖಿ

By

Published : Oct 7, 2020, 11:16 AM IST

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡಗಳು ಪೈಪೋಟಿ ನಡೆಸಲಿವೆ.

ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್​ ತಂಡ ಆಡಿದ 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಸೋತಿದ್ದರೆ, 2 ಪಂದ್ಯದಲ್ಲಿ ಜಯಗಳಿಸಿದೆ. ಇತ್ತ ಸತತ ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್​ಕೆ ಕಳೆದ ಪಂದ್ಯದಲ್ಲಿ 10 ವಿಕೆಟ್​ಗಳ ಅಂತರದಿಂದ ಜಯ ಸಾಧಿಸಿದ್ದು, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಚೆನ್ನೈ ಸೂಪರ್​ ಕಿಂಗ್ಸ್ ತಂಡ

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್​ನದ್ದೇ ತಲೆ ನೋವಾಗಿತ್ತು. ಡು ಪ್ಲೆಸಿಸ್ ಮತ್ತು ಧೋನಿ ಹೊರತುಪಡಿಸಿ ಯಾವೊಬ್ಬ ಆಟಗಾರರರೂ ಉತ್ತಮ ಪ್ರದರ್ಶನ ತೋರಿರಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ವಿಕೆಟ್ ನಷ್ಟವಿಲ್ಲದೆ 179 ರನ್​ ಚೇಸ್​ ಮಾಡಿ ಭರ್ಜರಿ ಜಯಗಳಿಸಿದೆ. ಆರಂಭದಿಂದಲೂ ವೈಫಲ್ಯ ಅನುಭವಿಸಿದ್ದ ವ್ಯಾಟ್ಸನ್​ ಲಯ ಕಂಡುಕೊಂಡಿದ್ದು ಚೆನ್ನೈನ ಬಲ ಹೆಚ್ಚಿಸಿದೆ.

ಬೌಲಿಂಗ್​ನಲ್ಲಿ ಸಿಎಸ್​ಕೆ ಆಟಗಾರರು ಸುಧಾರಿಸಬೇಕಿದೆ. ಜಡೇಜಾ, ಪೀಯೂಷ್‌ ಚಾವ್ಲಾ, ದೀಪಕ್‌ ಚಹಾರ್‌, ಶಾರ್ದೂಲ್ ಠಾಕೂರ್ ವಿಕೆಟ್ ಪಡೆದರೂ ಕೊಂಚ ದುಬಾರಿಯಾಗುತ್ತಿದ್ದಾರೆ. ಕಳೆದ 2 ಪಂದ್ಯಗಳಿಂದ ಬ್ರಾವೊ ಬೌಲಿಂಗ್​ನಲ್ಲಿ ಕಮಾಲ್ ಮಾಡುತ್ತಿಲ್ಲ.

ಕೆಕೆಆರ್​ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಮಾರ್ಗನ್​ ಲಯಕ್ಕೆ ಮರಳಿದ್ದು ಕಳೆದ 2 ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ನಿತೀಶ್ ರಾಣಾ ಕೂಡ ಉತ್ತಮ ಲಯದಲ್ಲಿದ್ದಾರೆ. ಕಾರ್ತಿಕ್​ ಜೊತೆಗೆ ಸ್ಫೋಟಕ ಆಟಗಾರರಾದ ರಸೆಲ್​ ಅವರಂತಹ ಆಲ್​ರೌಂಡರ್​ ಇರುವುದರಿಂದ ಬಲಿಷ್ಠ ತಂಡವಾಗಿದೆ. ಆದರೆ ನರೈನ್​ ಬ್ಯಾಟ್ ಈ ಬಾರಿ ಹೆಚ್ಚು ಸದ್ದು ಮಾಡುತ್ತಿಲ್ಲ, ಇದು ಕೆಕೆಆರ್​ಗೆ ಕೊಂಚ ಹಿನ್ನಡೆಯಾಗಿದೆ.

ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕಮಾಲ್ ಮಾಡಿದ್ದ ಕೆಕೆಆರ್​ ಬೌಲರ್ಸ್ ಕಳೆದ ಪಂದ್ಯದಲ್ಲಿ ಮಂಕಾಗಿದ್ದರು. ರಸೆಲ್ ಹೊರತುಪಡಿಸಿದ ಪ್ರತಿಯೊಬ್ಬರೂ ಓವರ್​ಗೆ 11 ರಿಂದ 12 ರನ್​ ಬಿಟ್ಟುಕೊಟ್ಟು ದುಬಾರಿಯಾಗಿದ್ದರು.

ಕೆಕೆಆರ್ vs ಕೆಕೆಆರ್

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಕೆಕೆಆರ್​ ಜಯದ ನಗೆ ಬೀರಿದ್ರೆ, 14 ಪಂದ್ಯಗಳಲ್ಲಿ ಸಿಎಸ್​ಕೆ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.

ABOUT THE AUTHOR

...view details