ದುಬೈ:ಇಂದು ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಸಿಎಸ್ಕೆ ತಂಡ ನಾಕ್ಔಟ್ ರೇಸ್ನಿಂದ ಹೊರಬಿದ್ದಿದ್ದು ಇದೊಂದು ಔಪಚಾರಿಕ ಪಂದ್ಯವಾಗಿದೆ. ಆದರೆ ಕೋಲ್ಕತ್ತಾ ತಂಡಕ್ಕೆ ಇಂದಿನ ಪಂದ್ಯ ಹೆಚ್ಚು ಮಹತ್ವದ್ದಾಗಿದೆ. ಆಡಿರುವ 12 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಪಡೆದುಕೊಂಡಿದ್ದು, ನಾಕೌಟ್ ಹಂತಕ್ಕೆ ತಲುಪಬೇಕಾದ್ರೆ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಅಲ್ಲದೆ ರನ್ ರೇಟನ್ನೂ ಹೆಚ್ಚಿಸಿಕೊಳ್ಳಬೇಕಿದೆ.
ಪಂಜಾಬ್ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ತಂಡ ಸೋಲು ಕಂಡಿದ್ದು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕುವಂತೆ ಮಾಡಿದೆ. ಕಳೆದ ಪಂದ್ಯದಲ್ಲಿ ಶುಬ್ಮನ್ ಗಿಲ್, ಮಾರ್ಗನ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್ಮನ್ಗಳು ಮಿಂಚಲಿಲ್ಲ. ಇಂದಿನ ಪಂದ್ಯ ಮಹತ್ವದ್ದಾಗಿದ್ದು, ಆರಂಬಿಕ ಆಟಗಾರರ ಮೇಲೆ ಹೆಚ್ಚು ಜವಾಬ್ದಾರಿ ಇದೆ.
ಕಳೆದ ಪಂದ್ಯದಲ್ಲಿ ಮಿಂಚಿದ್ದ ವರುಣ್ ಚಕ್ರವರ್ತಿ ಮತ್ತು ಪ್ಯಾಟ್ ಕಮ್ಮಿನ್ಸ್ ಮೇಲೆ ಹೆಚ್ಚು ನಿರೀಕ್ಷೆ ಇದೆ. ವೇಗಿ ಲೂಕಿ ಫರ್ಗ್ಯುಸನ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ, ಪ್ರಸೀದ್ ಕೃಷ್ಣ, ನರೈನ್ ಸಿಎಸ್ಕೆ ಆಟಗಾರರನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.
ಸಿಎಸ್ಕೆ ಈ ಸೀಸನ್ನಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದು, ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆಲುವು ಸಾಧಿಸಿತ್ತು. ಯುವ ಆಟಗಾರ ರುತುರಾಜ್ ಗಾಯಕ್ವಾಡ್, ಪ್ಲೆಸಿಸ್, ರಾಯುಡು ಮತ್ತು ಧೋನಿ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಬೌಲಿಂಗ್‌ನಲ್ಲಿ ದೀಪಕ್ ಚಾಹರ್, ಸ್ಯಾಮ್ ಕರ್ರನ್, ಸ್ಯಾಂಟ್ನರ್, ಕರಣ್ ಶರ್ಮಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 24 ಬಾರಿ ಮುಖಾಮುಖಿಯಾಗಿದ್ದು, 9 ಪಂದ್ಯಗಳಲ್ಲಿ ಕೆಕೆಆರ್ ಜಯದ ನಗೆ ಬೀರಿದ್ರೆ, 14 ಪಂದ್ಯಗಳಲ್ಲಿ ಸಿಎಸ್ಕೆ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.