ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಎಂಟು ವಿಕೆಟ್ ಸೋಲು ಕಂಡ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಕಾರಣ ಏನೆಂದು ತಿಳಿಸಿದ್ದಾರೆ.
ಸೋಮವಾರ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪರ ಮಿಂಚಿದ್ದ ಡಿ ವಿಲಿಯರ್ಸ್, ನಿನ್ನೆ ನಡೆದ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಐದು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿದ ವಿಲಿಯರ್ಸ್, ಶಮಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಪಂಜಾಬ್ ತಂಡದ ಪರ ಇಬ್ಬರು ಲೆಗ್ ಸ್ಪಿನ್ನರ್‌ಗಳು ಇದ್ದಿದ್ದರಿಂದ ಎಡ ಮತ್ತು ಮಲಗೈ ಬ್ಯಾಟ್ಸ್ಮನ್ಗಳ ಸಂಯೋಜನೆಯೊಂದಿಗೆ ಆಡಲು ಬಯಸಿದ್ದೆವು ಎಂದು ನಾಯಕ ಕೊಹ್ಲಿ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್, "ಪಂಜಾಬ್ ಉತ್ತಮ ಪ್ರದರ್ಶನ ತೋರಿದೆ. ಅವರು ಇಬ್ಬರು ಲೆಗ್ ಸ್ಪಿನ್ನರ್ಗಳನ್ನು ಹೊಂದಿದ್ದರು. ಹೀಗಾಗಿ ಎಡ ಮತ್ತು ಬಲಗೈ ಬ್ಯಾಟ್ಸ್ಮನ್ಗಳ ಸಂಯೋಜನೆ ಬಗ್ಗೆ ಮಾತುಕತೆ ನಡೆಸಿದ್ದೆವು. ಆದ್ದರಿಂದ ವಿಲಿಯರ್ಸ್ ಆರನೇ ಕ್ರಮಾಂಕದಕಲ್ಲಿ ಬ್ಯಾಟಿಂಗ್ ನಡೆಸಬೇಕಾಯ್ತು" ಎಂದಿದ್ದಾರೆ.
"ನಾವು ತೆಗೆದುಕೊಂಡ ನಿರ್ಧಾರಗಳಿಂದ ನಮಗೆ ತುಂಬಾ ಸಂತೋಷವಾಗಿದೆ. ಆದರೆ ಉತ್ತಮ ಫಲಿತಾಂಶ ದೊರೆಯಲಿಲ್ಲ. ಗೇಲ್ ಮತ್ತು ರಾಹುಲ್ 16ನೇ ಓವರ್ನಲ್ಲಿ 20 ರನ್ ಗಳಿಸಿದರು. ಆಗಲೇ ಪಂದ್ಯ ಗೆಲ್ಲುವ ಎಲ್ಲಾ ಭರವಸೆ ಕಳೆದುಕೊಂಡೆವು" ಎಂದಿದ್ದಾರೆ.