ಅಬುಧಾಬಿ: ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 8ನೇ ಪಂದ್ಯದಲ್ಲಿ ಟೂರ್ನಿಯ ಮೊದಲ ಜಯ ದಾಖಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್ ಅನ್ನು 7 ವಿಕೆಟ್‌ಗಳಿಂದ ಸೋಲಿಸಿತು.
143 ರನ್‌ಗಳ ಟಾರ್ಗೆಟ್ ಬೆನ್ನು ಹತ್ತಿದ ಕೆಕೆಆರ್ 53ರನ್ ಆಗುವಷ್ಟರಲ್ಲಿಷ್ಟ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಈ ಒತ್ತಡದ ಬಳಿಕ ನಾಲ್ಕನೇ ವಿಕೆಟ್‌ಗೆ ಶುಬ್ಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅಜೇಯ 92 ರನ್‌ಗಳ ಜೊತೆಯಾಟವಾಡಿ, ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಗಿಲ್ ತಮ್ಮ ಐದನೇ ಐಪಿಎಲ್ ಅರ್ಧಶತಕ ಗಳಿಸಿ 70 ರನ್ ಮೂಲಕ ನಾಟೌಟ್ ಆಗಿದ್ದರೆ, ಮೋರ್ಗನ್ 29 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾದರು.
ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್ 4 ವಿಕೆಟ್ ನಷ್ಟಕ್ಕೆ 142 ರನ್ಗಳಿಸಿತು. ತಂಡದ ಪರ ಮನೀಶ್ ಪಾಂಡೆ 38 ಎಸೆತಗಳಲ್ಲಿ 51 ರನ್ಗಳಿಸಿದ್ದು, ಗರಿಷ್ಠ ಸ್ಕೋರ್ ಆಗಿದೆ. ನಾಯಕ ಡೇವಿಡ್ ವಾರ್ನರ್- 36 (30), ಜಾನಿ ಬೈರ್ಸ್ಟೋವ್ 5 (10), ವೃದ್ಧಿಮಾನ್ ಸಹಾ 30 (31), ಮೊಹಮ್ಮದ್ ನಬಿ ಮತ್ತು ಅಭಿಷೇಕ್ ಶರ್ಮಾ ಅಜೇಯರಾಗಿ 11 ಹಾಗೂ 2 ರನ್ ಗಳಿಸಿದರು.
ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಏಳು ವಿಕೆಟ್ಗಳ ಅಂತರದಿಂದ ಗೆದ್ದ ಕೆಕೆಆರ್ ಆರಂಭಿಕದಲ್ಲಿ ಟಾಪ್ ಆರ್ಡರ್ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸುನೀಲ್ ನರೈನ್ ಹಾಗೂ ನಾಯಕ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟ್ ಆದರು. ನಿತೀಶ್ ರಾಣಾ 26 ರನ್‌ಗಳ ಅಲ್ಪ ಕಾಣಿಕೆ ನೀಡಿ ಟಿ ನಟರಾಜನ್ಗೆ ವಿಕೆಟ್ ಒಪ್ಪಿಸಿದರು. ಈ ಬಳಿಕ ಒಂದಾದ ಗಿಲ್ ಮತ್ತು ಮೋರ್ಗಾನ್ ಜೋಡಿ ಕೆಕೆಆರ್ ಅನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿತು.