ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೆಚ್ಚು ಪಂದ್ಯ ಆಡುವ ಅವಕಾಶವನ್ನು ಎದುರು ನೋಡುತ್ತಿದ್ದೇನೆ ಎಂದಿರುವ ವಿಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್, ರಾಜಸ್ಥಾನ ರಾಯಲ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದು ಸಂತೋಷ ತರಿಸಿದೆ ಎಂದಿದ್ದಾರೆ.
2020ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಪಂದ್ಯ ಆಡಿದ ಜೇಸನ್ ಹೋಲ್ಡರ್, ನಾಲ್ಕು ಓವರ್ ಬೌಲಿಂಗ್ ನಡೆಸಿ 33 ರನ್ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್ ಕಬಳಿಸಿದ್ರು.
ವಿಕೆಟ್ ಪಡೆದ ಸಂಭ್ರಮದಲ್ಲಿ ಜೇಸನ್ ಹೋಲ್ಡರ್ ಪಂದ್ಯ ಮುಗಿದ ಬಳಿಕ ಮಾತನಾಡಿರುವ ಹೋಲ್ಡರ್, "ಇಂದಿನ ಪ್ರದರ್ಶನ ಸಂತೋಷ ತರಿಸಿದೆ. ನಾನು ಕೊನೆಯ ಬಾರಿಗೆ ಐಪಿಎಲ್ ಪಂದ್ಯ ಆಡಿ ತುಂಬಾ ಸಮಯವಾಗಿತ್ತು. ಐಪಿಎಲ್ ಕ್ರಿಕೆಟ್‌ಗೆ ಮರಳಲು ನಾನು ಬಹಳ ಸಮಯದಿಂದ ಬಯಸಿದ್ದೆ ಮತ್ತು ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದ್ದು, ಪಂದ್ಯದ ಗೆಲುವಿಗೆ ಕಾಣಿಕೆ ನೀಡಿರುವುದು ಸಂತೋಷದ ವಿಚಾರ" ಎಂದಿದ್ದಾರೆ.
ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದ ಆಸಿಸ್ ಆಟಗಾರ ಮಿಚೆಲ್ ಮಾರ್ಷ್, ಟೂರ್ನಿಯಿಂದ ಹೊರಗುಳಿದ ಪರಿಣಾಮ ಹೈದರಾಬಾದ್ ತಂಡ, ವೆಸ್ಟ್ ಇಂಡೀಸ್ ಆಟಗಾರ ಜೇಸನ್ ಹೋಲ್ಡರ್ಗೆ ಬುಲಾವ್ ನೀಡಿತ್ತು.
155 ರನ್ಗಳ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭಿಕರಾದ ಡೇವಿಡ್ ವಾರ್ನರ್(4) ಹಾಗೂ ಜಾನಿ ಬೈರ್ಸ್ಟೋವ್(10) ವಿಕೆಟ್ಅನ್ನು ಕೇವಲ 16 ರನ್ಗಳಾಗುವಷ್ಟರಲ್ಲಿ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಮನೀಶ್ ಪಾಂಡೆ(83) ಹಾಗೂ ವಿಜಯ್ ಶಂಕರ್(52) ಸಿಡಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ಇನ್ನು 11 ಎಸೆತಗಳಿರುವಂತೆ ಹೈದರಾಬಾದ್ ತಂಡ ಗೆಲುವಿನ ನಗೆ ಬೀರಿತು.