ಶಾರ್ಜಾ: ಶುಕ್ರವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 46 ರನ್‌ಗಳ ಗೆಲುವು ದಾಖಲಿಸಿದ್ದು, ತಮ್ಮ ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ್ ಬಗ್ಗೆ ತರಬೇತುದಾರ ರಿಕಿ ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡ 185 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾಯಿತು. ರನ್ಗಳಿಸಲು ಪರದಾಡಿದ ಸ್ಟೀವ್ ಸ್ಮಿತ್ ಪಡೆ 138 ರನ್ಗಳಿಗೆ ಸರ್ವಪತನ ಕಂಡು 46 ರನ್ಗಳಿಂದ ಡೆಲ್ಲಿ ತಂಡಕ್ಕೆ ಶರಣಾಯಿತು.
ಈ ಬಗ್ಗೆ ಟ್ವೀಟ್ ಮಾಡಿರುವ ಪಾಂಟಿಂಗ್ "ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ನಮ್ಮ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ. ಶಾರ್ಜಾ ಮೈದಾನದಲ್ಲಿ ಯಾವುದೇ ತಂಡವನ್ನು 138 ರನ್ಗಳಿಗೆ ಕಟ್ಟಿ ಹಾಕುವುದು ತುಂಬಾ ಕಷ್ಟ. ಹೆಟ್ಮಯರ್, ಸ್ಟೋಯ್ನಿಸ್ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡೆಲ್ಲಿ ಬೌಲಿಂಗ್ ದಾಳಿಗೆ ರಾಜಸ್ಥಾನ್ ರಾಯಲ್ಸ್ನ ಬ್ಯಾಟ್ಸ್‌ಮನ್‌ಗೆ ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ರಾಹುಲ್ ತೆವಾಟಿಯಾ (38) ಮತ್ತು ಯಶಸ್ವಿ ಜೈಸ್ವಾಲ್ (34) ಮಾತ್ರ ಗೌರವಾನ್ವಿತ ಸ್ಕೋರ್ ದಾಖಲಿಸಿದ್ರು.
ಡೆಲ್ಲಿ ತಂಡದ ಪರ ಕಗಿಸೊ ರಬಾಡಾ ಮೂರು ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ತಲಾ ಎರಡು ವಿಕೆಟ್ ಕಬಳಿಸಿದರು.