ದುಬೈ: ಬುಧವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಶಿಖರ್ ಧವನ್ 39ನೇ ಅರ್ಧ ಶತಕ ಸಿಡಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಎಡಗೈ ಓಪನರ್ ಧವನ್, ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್ ಸಿಡಿಸುವ ಮೂಲಕ ಈ ದಾಖಲೆ ನಿರ್ಮಾಣ ಮಾಡಿದ್ದಾರೆ. ಟೀಂ ಇಂಡಿಯಾ ಆಟಗಾರರಾದ ವಿರಾಟ್, ರೋಹಿತ್ ಮತ್ತು ರೈನಾ 38 ಅರ್ಧಶತಕ ಸಿಡಿಸಿದ್ದು, ಈ ಮೂವರನ್ನು ಹಿಂದಿಕ್ಕಿದ ಧವನ್ ಅಗ್ರ ಸ್ಥಾನಕ್ಕೇರಿದ್ದಾರೆ.
ಒಟ್ಟಾರೆಯಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುವ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್, ಧವನ್ಗಿಂತ ಹೆಚ್ಚು ಅಂದರೆ 46 ಐಪಿಎಲ್ ಅರ್ಧಶತಕಗಳನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 36 ಅರ್ಧಶತಕ ಸಿಡಿಸಿದ್ದಾರೆ. ಧವನ್ ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ರತಿನಿಧಿಸಿದ್ದರು. ಈ ವೇಳೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ವಾರ್ನರ್ ಅವರೊಂದಿಗೆ ಆರು ಬಾರಿ ಶತಕದ ಜೊತೆಯಾಟ ಆಡಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ 33 ಎಸೆತಗಳನ್ನು ಎದುರಿಸಿದ ಧವನ್, 6 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 57 ರನ್ ಸಿಡಿಸಿದ್ರು. ಈ ಸೀಸನ್ನಲ್ಲಿ ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿರುವ ಧವನ್, 2 ಅರ್ಧಶತಕ ಸಿಡಿಸಿದ್ದಾರೆ.