ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 30ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿದಲ್ಲಿ ಎಡವಿದ ಡೆಲ್ಲಿ ತಂಡ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಆಟಕ್ಕೆ ಚೇತರಿಸಿಕೊಂಡಿತು. ಶಿಖರ್ ಧವನ್ 30 ಎಸೆತಗಳಲ್ಲಿ ತಮ್ಮ 39ನೇ ಐಪಿಎಲ್ ಅರ್ಧಶತಕ ಪೂರೈಸಿದರು. ಬಳಿಕ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಕ್ಯಾಚ್ ನೀಡಿ 57 ರನ್ಗಳೊಂದಿಗೆ ಧವನ್ ಔಟಾದರು. ಶ್ರೇಯಸ್ ಅಯ್ಯರ್ 40 ಎಸೆತಗಳಲ್ಲಿ ಅರ್ಧಶತಕ (53 ರನ್ಗಳು) ಪೂರೈಸಿ ಕಾರ್ತಿಕ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು. ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ಗಳನ್ನು ಗಳಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ 4 ಓವರ್ನಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 162 ರನ್ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಸ್ಪೋಟಕ ಆರಂಭ ಒದಗಿಸಿದ್ರೂ ಪ್ರಯೋಜನವಾಗಲಿಲ್ಲ. ಮೊದಲ 3 ಓವರ್ನಲ್ಲೇ ತಂಡದ ಮೊತ್ತವನ್ನು 30 ರ ಗಡಿದಾಟಿಸಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಈ ಹಂತದಲ್ಲಿ ಅನ್ರಿಕ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಬಟ್ಲರ್ (22) ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು. ಇದರ ಬೆನ್ನಲ್ಲೇ ಆರ್. ಅಶ್ವಿನ್ ನಾಯಕ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ಮತ್ತೊಂದು ಆಘಾತ ನೀಡಿದರು.
ಕೊನೆಯ 2 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ಗೆ ಗೆಲ್ಲಲು 25 ರನ್ಗಳ ಅವಶ್ಯಕತೆಯಿತ್ತು. 19ನೇ ಓವರ್ ಎಸೆದ ಕಗಿಸೋ ರಬಾಡ ಕೇವಲ 4 ರನ್ ನೀಡಿ ಜೋಫ್ರಾ ವಿಕೆಟ್ ಪಡೆದರು. ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನ್ಗೆ 22 ರನ್ಗಳು ಬೇಕಿತ್ತು. ಈ ವೇಳೆ ಬೌಂಡರಿ ಲೈನ್ನಲ್ಲಿ ರಹಾನೆ ಮಾಡಿದ ಅದ್ಬುತ ಫೀಲ್ಡಿಂಗ್ 5 ರನ್ ಸೇವ್ ಮಾಡಿತು. ಅಂತಿಮ ಓವರ್ನಲ್ಲಿ ಕೇವಲ 8 ರನ್ ನೀಡಿ ಶ್ರೇಯಸ್ ಗೋಪಾಲ್ ವಿಕೆಟ್ ಪಡೆದರು. ಈ ಮೂಲಕ ತಂಡಕ್ಕೆ 13 ರನ್ಗಳ ಜಯ ತಂದುಕೊಟ್ಟರು.
ಡೆಲ್ಲಿ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಕಗಿಸೋ ಅನ್ರಿಕ್ ನಾರ್ಟ್ಜೆ 4 ಓವರ್ನಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದು ಗಮನ ಸೆಳೆದರು. ರಬಾಡ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು.