ಅಬುಧಾಬಿ: ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ.
ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದೆ. ಆಡಿದ 10 ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಕೆಕೆಆರ್ ತಂಡ 10ರಲ್ಲಿ 5 ಪಂದ್ಯ ಜಯಿಸಿದ್ದು, 5ರಲ್ಲಿ ಸೋಲು ಕಂಡಿದೆ.
ಡೆಲ್ಲಿ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಹೊರತುಪಡಿಸಿ ಯಾವೊಬ್ಬ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರಲಿಲ್ಲ. ಪೃಥ್ವಿ ಶಾ ಕಳೆದ ಕೆಲ ಪಂದ್ಯಗಳಿಂದ ವೈಫಲ್ಯ ಅನುಭವಿಸುತ್ತಿದ್ದಾರೆ. ಶ್ರೇಯಸ್ ಐಯ್ಯರ್, ಪಂತ್, ಸ್ಟೊಯ್ನೀಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ತೋರಿದ್ದಾರೆ. ಕಳೆದ 2 ಪಂದ್ಯಗಳಲ್ಲಿ ಶತಕ ಸಿಡಿಸಿರುವ ಶಿಖರ್ ಧವನ್ ಡೆಲ್ಲಿಗೆ ಭರವಸೆಯ ಆಟಗಾರರಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಕ್ಯಾಪಿಟಲ್ಸ್ ಮೇಲುಗೈ ಹೊಂದಿದೆ. ಕಗಿಸೊ ರಬಾಡ, ನೋರ್ಟ್ಜೆ, ಅಕ್ಸರ್ ಪಟೇಲ್, ಆರ್.ಅಶ್ವಿನ್, ಸ್ಟೋಯ್ನಿಸ್ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ.
ಬಲಿಷ್ಠ ತಂಡಗಳ ವಿರುದ್ಧ ಗೆಲುವು ಸಾಧಿಸಿದ್ದ ಕೆಕೆಆರ್, ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಹೀನಾಯ ಸೋಲು ಕಂಡಿತ್ತು. ಬೆಂಗಳೂರು ಬೌಲಿಂಗ್ ದಾಳಿಗೆ ಕೆಕೆಆರ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಸೇರಿದ್ರು. ಆದರೆ ಇಂದಿನ ಪಂದ್ಯ ಕೆಕೆಆರ್ಗೆ ಮಹತ್ವದ್ದಾಗಿದ್ದು, ಶುಬ್ಮನ್ ಗಿಲ್, ನಿತೀಶ್ ರಾಣ, ತ್ರಿಪಾಠಿ, ಮಾರ್ಗನ್, ದಿನೇಶ್ ಕಾರ್ತಿಕ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವಿಂಡೀಸ್ ಆಟಗಾರರಾದ ರಸೆಲ್ ಮತ್ತು ನರೈನ್ ತಂಡದಿಂದ ಹೊರಗುಳಿದಿರುವುದು ಕೆಕೆಆರ್ಗೆ ಹಿನ್ನಡ ಉಂಟುಮಾಡಿದೆ. ವೇಗಿ ಲೂಕಿ ಫರ್ಗ್ಯುಸನ್ ಕೆಕೆಆರ್ಗೆ ಹೊಸ ಭರವಸೆ ಮೂಡಿಸಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ, ಪ್ರಸೀದ್ ಕೃಷ್ಣ ಇಂದಿನ ಪಂದ್ಯದಲ್ಲಿ ಮಿಂಚುವ ಅವಶ್ಯಕತೆ ಇದೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 25 ಬಾರಿ ಮುಖಾಮುಖಿಯಾಗಿದ್ದು, 13ರಲ್ಲಿ ಕೆಕೆಆರ್ ಗೆಲುವು ಸಾಧಿಸಿದ್ರೆ, 12 ಪಂದ್ಯದಲ್ಲಿ ಡೆಲ್ಲಿ ಜಯದ ನಗೆ ಬೀರಿದೆ.